ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಪ್ರತಿಷ್ಠಾನಕ್ಕೆ 10 ಸಾವಿರ ಡಾಲರ್ ದೇಣಿಗೆ ನೀಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕೆನಡಾದಲ್ಲಿರುವ ಯುವಿ ಪ್ರತಿಷ್ಠಾನಕ್ಕೆ ಶಾಹೀದ್ ಆಫ್ರಿದಿ ದೇಣಿಗೆ ನೀಡಿದ್ದ ಸಂಗತಿಯನ್ನು ಪಾಕಿಸ್ತಾನದ ಪತ್ರಕರ್ತ ಸಾಜ್ ಸಾದಿಕ್ ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ.
ಕೆಲದಿನಗಳ ಹಿಂದೆ ಕರೊನಾ ವಿರುದ್ಧದ ಹೋರಾಟಕ್ಕಾಗಿ ಪಾಕಿಸ್ತಾನದ ಶಾಹೀದ್ ಆಫ್ರಿದಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವಂತೆ ಯುವರಾಜ್ ಸಿಂಗ್ ಮತ್ತು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರಚಾರ ಮಾಡಿದ್ದರು. ಭಾರತದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸಂಪೂರ್ಣ ಹಳಸಿದೆ. ಇದರಿಂದಾಗಿ ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ, ಬೇರಾವುದೇ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸುತ್ತದೆ. ಹೀಗಿರುವಾಗ ಶಾಹೀದ್ ಆಫ್ರಿದಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವಂತೆ ಭಾರತದ ಮಾಜಿ ಆಟಗಾರರು ಪ್ರಚಾರ ಮಾಡಿದ್ದು ಭಾರತೀಯರೆಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.