ಕ್ರೀಡೆ

ಯುಎಇಯಲ್ಲಿ ಜೈವಿಕ-ಸುರಕ್ಷೆ ಉಲ್ಲಂಘಿಸುವ ಕ್ರಿಕೆಟಿಗರಿಗೆ 7 ದಿನ ಕ್ವಾರಂಟೈನ್!

ನವದೆಹಲಿ: ಭಾರತದಲ್ಲಿನ ಕರೊನಾ ವೈರಸ್ ಹಾವಳಿಯಿಂದಾಗಿ ಐಪಿಎಲ್ 13ನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಭಾರತದಲ್ಲಿ ಕರೊನಾ ಪರೀಕ್ಷೆ ಮುಗಿಸಿ ಅರಬ್ ದೇಶಕ್ಕೆ ತೆರಳಿದ ಬಳಿಕ ಕ್ರಿಕೆಟಿಗರನ್ನು ಅಲ್ಲೂ ಒಂದು ವಾರ ಕಾಲ ಕ್ವಾರಂಟೈನ್‌ನಲ್ಲಿಟ್ಟು ಜೈವಿಕ-ಸುರಕ್ಷಾ ವಾತಾವರಣದೊಳಗೆ ಸೇರಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಆಟಗಾರ ಈ ಸಮಯದಲ್ಲಿ ಜೈವಿಕ ಸುರಕ್ಷಾ ವಾತಾವರಣದ ನಿಯಮ ಉಲ್ಲಂಘನೆ ಮಾಡಿದರೆ 7 ದಿನಗಳ ಕಾಲ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ.

ಯುಎಇಯಲ್ಲಿ ಜೈವಿಕ-ಸುರಕ್ಷಾ ವಾತಾವರಣದ ನಿಯಮ ಉಲ್ಲಂಘಿಸುವವರನ್ನು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡಲಾಗುತ್ತದೆ. ಈ ವೇಳೆ ಅವರಿಗೆ 6 ಮತ್ತು 7ನೇ ದಿನಗಳಲ್ಲಿ ನೆಗೆಟಿವ್ ವರದಿ ಬಂದರೆ ಜೈವಿಕ-ಬಬಲ್‌ಗೆ ಮರಳಲು ಅವಕಾಶ ನೀಡಲಾಗುತ್ತದೆ ಎಂದು ಬಿಸಿಸಿಐ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಎಲ್ಲ ತಂಡಗಳಿಗೆ ಆಗಸ್ಟ್ 20ಕ್ಕೆ ಮುನ್ನ ಯುಎಇಗೆ ತೆರಳುವುದು ಬೇಡ ಎಂದು ಬಿಸಿಸಿಐ ಸೂಚಿಸಿದೆ. ಇದರಿಂದ ಎಲ್ಲ ಅಗತ್ಯ ಪರೀಕ್ಷಾ ಮತ್ತು ಕ್ವಾರಂಟೈನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.

ಕುಟುಂಬ ಸದಸ್ಯರ ಪ್ರಯಾಣ ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ

ಆಟಗಾರರು ಮತ್ತು ಸಿಬ್ಬಂದಿ ಯುಎಇಗೆ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಅವಕಾಶ ನೀಡುವ ಬಗೆಗಿನ ನಿರ್ಧಾರವನ್ನು ಬಿಸಿಸಿಐ, ಫ್ರಾಂಚೈಸಿಗಳಿಗೆ ಬಿಟ್ಟಿದೆ. ಆದರೆ ಕುಟುಂಬ ಸದಸ್ಯರಿಗೆ ಅವಕಾಶ ದೊರೆತರೂ ಅವರು ಜೈವಿಕ-ಸುರಕ್ಷಾ ವಾತಾವರಣದ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಅವರು ಕೂಡ ಜೈವಿಕ-ಬಬಲ್ ಹೊರಗಿನವರನ್ನು ಭೇಟಿಯಾಗಲು ಅವಕಾಶ ಇರುವುದಿಲ್ಲ. ಇನ್ನು ಪಂದ್ಯದ ವೇಳೆ ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶಕ್ಕೆ ಅವರಿಗೆ ಪ್ರವೇಶ ನೀಡಲಾಗುವುದಿಲ್ಲ. ಅಭ್ಯಾಸದ ವೇಳೆಯೂ ಅವರು ಆಟಗಾರರಿಂದ ದೂರವಿರಬೇಕು.