ಕ್ರೀಡೆ

ಐಪಿಎಲ್​ ಟೂರ್ನಿ ಮರುನಿಗದಿಗೆ ಸೆಪ್ಟೆಂಬರ್​ನಲ್ಲಿದೆ ಅತ್ಯುತ್ತಮ ಅವಕಾಶ!

ಬೆಂಗಳೂರು: ಭಾರತ-ಪಾಕ್​ ಉದ್ವಿಗ್ನತೆ ಇನ್ನೊಂದು ವಾರದಲ್ಲೂ ತಣ್ಣಗಾಗದೆ ಐಪಿಎಲ್​ ಮತ್ತೆ ಮುಂದೂಡಿಕೆಯಾದರೆ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿರುವ ಏಷ್ಯಾಕಪ್​ ಸಮಯದಲ್ಲಿ ಮರುನಿಗದಿಪಡಿಸುವ ಅವಕಾಶ ಬಿಸಿಸಿಐ ಮುಂದಿದೆ. ಹಾಲಿ ಸನ್ನಿವೇಶದಲ್ಲಿ ಭಾರತ-ಪಾಕ್​ ಒಳಗೊಂಡ ಏಷ್ಯಾಕಪ್​ ಟೂರ್ನಿ ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಅದೇ ಸಮಯದಲ್ಲಿ ಐಪಿಎಲ್​ ಮರುನಿಗದಿಪಡಿಸುವುದು ಅತ್ಯುತ್ತಮ ಆಯ್ಕೆ ಎನಿಸಿದೆ.

ಐಪಿಎಲ್​ನ ಉಳಿದ ಪಂದ್ಯಗಳ ಆಯೋಜನೆಗೆ 10ರಿಂದ 12 ದಿನ ಸಾಕಾಗುತ್ತದೆ. ಏಷ್ಯಾಕಪ್​ ಟೂರ್ನಿ ಆಯೋಜನೆಗೆ ಸೆಪ್ಟೆಂಬರ್​ನಲ್ಲಿ 19 ದಿನಗಳ ಕಾಲಾವಕಾಶ ನೀಡಲಾಗಿದೆ. ಹೀಗಾಗಿ ಭಾರತ ತಂಡ ಜೂನ್​-ಜುಲೈ ತಿಂಗಳ ಇಂಗ್ಲೆಂಡ್​ ಪ್ರವಾಸವನ್ನು ಪೂರ್ಣಗೊಳಿಸಿದ ಬಳಿಕ ಐಪಿಎಲ್​ ಮರುನಿಗದಿಗೆ ಅವಕಾಶವಿದೆ. ಆದರೆ ವಿದೇಶಿ ಆಟಗಾರರ ಲಭ್ಯತೆಯೊಂದೇ ಪ್ರಮುಖ ಸವಾಲು ಆಗಿರಲಿದೆ. ಆಗಸ್ಟ್​ನಲ್ಲಿ ನಿಗದಿಯಾಗಿರುವ ಭಾರತ ತಂಡದ ಬಾಂಗ್ಲಾದೇಶ ಪ್ರವಾಸವೂ ನಡೆಯುವುದು ಅನುಮಾನವೆನಿಸಿದೆ. ಆದರೆ ಆಗಸ್ಟ್​ 5ರಿಂದ 31ರವರೆಗೆ ಇಂಗ್ಲೆಂಡ್​ನ "ದಿ ಹಂಡ್ರೆಡ್​' ಟೂರ್ನಿ ನಿಗದಿಯಾಗಿದ್ದು, ಐಪಿಎಲ್​ನಲ್ಲಿ ಆಡುವ ಹೆಚ್ಚಿನ ವಿದೇಶಿ ಆಟಗಾರರು ಅದರಲ್ಲಿ ಆಡುವುದರಿಂದ ಆಗಸ್ಟ್​ನಲ್ಲಿ ಐಪಿಎಲ್​ ಮರುನಿಗದಿ ಕಷ್ಟವೆನಿಸಿದೆ. ಇದಲ್ಲದೆ ಆಗಸ್ಟ್​ನಲ್ಲಿ ದ. ಆಫ್ರಿಕಾ-ಆಸ್ಟ್ರೆಲಿಯಾ ನಡುವೆ ವೈಟ್​ಬಾಲ್​ ಸರಣಿಯೂ ನಿಗದಿಯಾಗಿದೆ.

ಸೆಪ್ಟೆಂಬರ್​ 2ರಿಂದ 14ರವರೆಗೆ ಇಂಗ್ಲೆಂಡ್​-ದ. ಆಫ್ರಿಕಾ ಸರಣಿ ನಿಗದಿಯಾಗಿದ್ದರೂ, ಇವೆರಡು ರಾಷ್ಟ್ರಗಳ ಮಂಡಳಿ ಜತೆ ಬಿಸಿಸಿಐ ಉತ್ತಮ ಸಂಬಂಧ ಹೊಂದಿರುವುದರಿಂದ ಮತ್ತು ಇವೆರಡು ದೇಶಗಳ ಲೀಗ್​ಗಳಲ್ಲಿ ಐಪಿಎಲ್ ಫ್ರಾಂಚೈಸಿಗಳ ಹೂಡಿಕೆ ಇರುವುದರಿಂದ, ಈ ದೇಶಗಳ ಆಟಗಾರರು ಐಪಿಎಲ್​ಗೆ ಲಭ್ಯರಾಗುವುದನ್ನು ನಿರೀಕ್ಷಿಸಬಹುದು. ಕೆರಿಬಿಯನ್​ ಪ್ರೀಮಿಯರ್​ ಲೀಗ್​ ಕೂಡ ಸೆಪ್ಟೆಂಬರ್​ನಲ್ಲಿ ನಡೆಯಲಿದ್ದರೂ, ವೆಸ್ಟ್​ ಇಂಡೀಸ್​ನ ಆಯ್ದ ಕೆಲ ಆಟಗಾರರು ಐಪಿಎಲ್​ಗೆ ಲಭ್ಯರಾಗುವುದು ಕಷ್ಟವಾಗದು.