ಅಹಮದಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಹೈವೋಲ್ಟೇಜ್ ಪಂದ್ಯವು ಐಸಿಸಿ ಬದಲು ಬಿಸಿಸಿಐ ಆಯೋಜನೆ ಮಾಡಿದ ದ್ವಿಪಕ್ಷೀಯ ಸರಣಿಯ ಪಂದ್ಯ ಎಂಬಂತೆ ಭಾಸವಾಯಿತು ಎಂದು ಪಾಕ್ ಕ್ರಿಕೆಟ್ ತಂಡದ ಮಿಕಿ ಅರ್ಥರ್ ಆರೋಪಿಸಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರ್ಥರ್ ಮೈದಾನದಲ್ಲಿ ಪಾಕಿಸ್ತಾನದ ಅಭಿಮಾನಿಗಳು ಇಲ್ಲದ ಕಾರಣ ಆಟಗಾರರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅರ್ಥರ್, ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರ ಬೆಂಬಲ ಭಾರತ ತಂಡದ ಕಡೆಗಿತ್ತು. ಇದರ ಪರಿಣಾಮ ಪಾಕಿಸ್ತಾನ ತಂಡದ ಮೇಲೆ ಬೀರಲಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಇದು ವಿಶ್ವಕಪ್ ಪಂದ್ಯವಲ್ಲ, ದ್ವಿಪಕ್ಷೀಯ ಸರಣಿಯ ಪಂದ್ಯ ಎಂಬಂತೆ ಭಾಸವಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಆಶ್ರಯದ ಟೂರ್ನಿ ಇದಾಗಿದೆ, ಆದರೆ ಇದನ್ನು ಬಿಸಿಸಿಐನ ಕಾರ್ಯಕ್ರಮದ ರೀತಿ ನಡೆಸಲಾಗಿದೆ. ಇದು ಐಸಿಸಿ ಟೂರ್ನಿಯಲ್ಲ, ಬಿಸಿಸಿಐನ ಟೂರ್ನಿ ಎಂಬ ಅನುಭವವಾಯಿತು. ಕ್ರೀಡಾಂಗಣದ ಸ್ಪೀಕರ್‌ಗಳಲ್ಲಿ ನನಗೆ ದಿಲ್ ದಿಲ್ ಪಾಕಿಸ್ತಾನ್ ಹಾಡು ಹೆಚ್ಚಾಗಿ ಕೇಳಿಸಲೇ ಇಲ್ಲ. ಇದು ತಂಡದ ಪ್ರದರ್ಶನದ ಮೇಲೆಯೂ ಪರಿಣಾಮ ಬೀರಿದೆ ಎಂದು ಮಿಕಿ ಅರ್ಥರ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ತಂಡದ ನಿರ್ದೇಶಕ ಮಿಕಿ ಅರ್ಥರ್ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್, ತಂಡದ ಸೋಲಿನ ಬಗ್ಗೆ ಮಾತನಾಡುವ ಬದಲು ಈ ರೀತಿಯ ಹೇಳಿಕೆಗಳನ್ನು ನೀಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಮಿಕಿ ಆರ್ಥರ್ ಇಲ್ಲಿ ತಮ್ಮ ಕೆಲಸವನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ಮಾಡುವ ಅಗತ್ಯವಿದೆ. ಭಾವನಾತ್ಮಕ ಹೇಳಿಕೆಗಳಿಗೆ ಇಲ್ಲಿ ಅವಕಾಶವಿಲ್ಲ ಎಂದು ಮಿಕಿ ಅರ್ಥರ್ ಹೇಳಿಕೆಗೆ ತಿರುಗೇಟು ನೀಡಿದ್ಧಾರೆ.