ಕ್ರೀಡೆ

ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್! ಪತಿ ವಿರುದ್ಧ ಗಂಭೀರ ಆರೋಪ, FIR ದಾಖಲು​ | Saweety Boora

Saweety Boora: ಭಾರತದ ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಸವೀತಿ ಬೂರಾ ತಮ್ಮ ಪತಿ, ಮಾಜಿ ಭಾರತೀಯ ಕಬಡ್ಡಿ ಆಟಗಾರ, ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ದೀಪಕ್ ಹೂಡಾ ಮತ್ತು ಅವರ ಕುಟುಂಬದ ವಿರುದ್ಧವೇ ಇದೀಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿಗೆ ಕಾರಣ?

ಹೆಚ್ಚುವರಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸವೀತಿ ನೀಡಿರುವ ದೂರಿನ ಆಧಾರದ ಮೇರೆಗೆ ಪತಿ ದೀಪಕ್ ಹೂಡಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹರಿಯಾಣದ ಹಿಸಾರ್​ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

1 ಕೋಟಿ ರೂ. ಮತ್ತು...

ದೀಪಕ್ ಹೂಡಾ ಹೆಚ್ಚುವರಿ ವರದಕ್ಷಿಣೆ ಜತೆಗೆ ತಮ್ಮಿಂದ ದುಬಾರಿ ಮೌಲ್ಯದ ಫಾರ್ಚೂನರ್ ಕಾರನ್ನು ವರದಕ್ಷಿಣೆ ರೂಪದಲ್ಲಿ ಕೇಳಿ, ನನ್ನನ್ನು ಪೀಡಿಸುತ್ತಿದ್ದಾರೆ ಎಂದು ಸವೀತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಬೆನ್ನಲ್ಲೇ ದೀಪಕ್ ಹೂಡಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 85ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಪತಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುಟುಂಬದಿಂದ ವರದಕ್ಷಿಣೆಯಾಗಿ ಒಂದು ಎಸ್‌ಯುವಿ ಕಾರು ಮತ್ತು 1 ಕೋಟಿ ರೂ. ಹಣ ಕೊಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ಸವೀತಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಸವೀತಿ ಅವರ ಪತಿ ಹೂಡಾ, ಬೂರಾ ಅವರ ಕುಟುಂಬವು ತನ್ನ ಆಸ್ತಿಯನ್ನು ಕಬಳಿಸಿ ಬೆದರಿಕೆ ಹಾಕಿದೆ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಹೂಡಾ ಹೇಳಿಕೆ ಭಿನ್ನ

ದೂರು ದಾಖಲಾದ ಹಿನ್ನೆಲೆ ಪೊಲೀಸರು ಹೂಡಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ರವಾನಿಸಿದ್ದಾರೆ. ಆದರೆ,  ಇಲ್ಲಿಯವರೆಗೂ ದೀಪಕ್​ ಹಾಜರಾಗಿಲ್ಲ ಎಂದು ವರದಿಯಾಗಿದೆ. "ಈಗಾಗಲೇ ನಾವು ಅವರಿಗೆ 2ರಿಂದ 3 ಬಾರಿ ನೋಟಿಸ್ ಕಳುಹಿಸಿದ್ದೇವೆ. ಆದರೆ, ಅವರು ಮಾತ್ರ ಹಾಜರಾಗಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಈ ಆಘಾತಕಾರಿ ಬೆಳವಣಿಗೆಯಿಂದ ನನ್ನ ಆರೋಗ್ಯಕ್ಕೆ ಹೊಡೆತ ಬಿದ್ದಿದೆ. ನಾನು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಹಾಜರಾಗುವ ಕುರಿತು ಈಗಾಗಲೇ ದಿನಾಂಕವನ್ನು ಕೋರಿದ್ದೇನೆ. ನಾನು ಖಂಡಿತವಾಗಿಯೂ ಪೊಲೀಸ್ ಠಾಣೆಗೆ ಭೇಟಿ ಕೊಡುತ್ತೇನೆ. ಆದರೆ, ನನ್ನ ಪತ್ನಿ ವಿರುದ್ಧ ನೆಗೆಟಿವ್ ಆಗಿ ಮಾತನಾಡುವುದಿಲ್ಲ. ನನಗೆ ಅವರನ್ನು ಭೇಟಿ ಮಾಡಲು ಅವಕಾಶವೇ ಸಿಕ್ಕಿಲ್ಲ" ಎಂದು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ,(ಏಜೆನ್ಸೀಸ್).