ನವದೆಹಲಿ: ಎಂಟನೇ ಶ್ರೇಯಾಂಕಿತ ಎಚ್ಎಸ್ ಪ್ರಣಯ್, ವಿಶ್ವ ನಂ. 2 ಡಬಲ್ಸ್ ಜೋಡಿಯಾಗಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ಇಂಡಿಯಾ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಎಚ್ಎಸ್ ಪ್ರಣಯ್ ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತೈವಾನ್ನ ವಾಂಗ್ ಜು ವೀ ವಿರುದ್ಧ 21-11, 17-21, 21-18ರಿಂದ ರೋಚಕ ಗೆಲುವು ಸಂಪಾದಿಸಿದರು. ಒಂದು ಗಂಟೆ 17 ನಿಮಿಷಗಳ ಕಾಲ ಸಾಗಿದ ಹೋರಾಟದಲ್ಲಿ ಪ್ರಣಯ್ 2ನೇ ಗೇಮ್ ಸೋತರೂ, ನಿರ್ಣಾಯಕ ಗೇಮ್ನಲ್ಲಿ ಹೋರಾಟಯುತ ನಿರ್ವಹಣೆ ತೋರಿ ಗೆಲುವು ಒಲಿಸಿಕೊಂಡರು.
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವ ನಂ. 5 ಡೆನ್ಮಾರ್ಕ್ನ ಕಿಮ್ ಆಸ್ಟ್ರುಪ್-ಆಂಡರ್ಸ್ ಸ್ಕಾರುಪ್ ರಸ್ಮುಸೆನ್ ಜೋಡಿಯನ್ನು 21-7, 21-10ರಿಂದ ಮಣಿಸಿತು.