ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಂತಿಮ ದಿನವೂ ನೀರಸ ಬೌಲಿಂಗ್ ದಾಳಿ ನಡೆಸಿದ ಬಳಿಕ ಎರಡನೇ ಇನಿಂಗ್ಸ್ನಲ್ಲಿ ತುಸು ಸುಧಾರಿತ ಬ್ಯಾಟಿಂಗ್ ನಿರ್ವಹಣೆ ತೋರಿದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 4ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಬಂಗಾಳ ವಿರುದ್ಧ ಡ್ರಾ ಸಮಾಧಾನ ಕಂಡಿದೆ. ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ ಬಂಗಾಳ ಮೂರು ಅಂಕ ಸಂಪಾದಿಸಿದರೆ, ಮಯಾಂಕ್ ಅಗರ್ವಾಲ್ ಬಳಗ ಮತ್ತೆ ಒಂದು ಅಂಕಕ್ಕೆ ತೃಪ್ತಿಪಟ್ಟಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 3 ವಿಕೆಟ್ಗೆ 127 ರನ್ಗಳಿಂದ ನಾಲ್ಕನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಬಂಗಾಳ, ಸುದೀಪ್ ಕುಮಾರ್ ರಮಿ (101*ರನ್, 193 ಎಸೆತ, 12 ಬೌಂಡರಿ, 2 ಸಿಕ್ಸರ್) ಶತಕ ಮತ್ತು ವೃತ್ತೀಜಿವನದ ಕೊನೇ ರಣಜಿ ಆಡುತ್ತಿರುವ ವಿಕೆಟ್ ಕೀಪರ್&ಬ್ಯಾಟರ್ ವೃದ್ಧಿಮಾನ್ ಸಾಹ (63*ರನ್, 70 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕದಾಟದಿಂದ 5 ವಿಕೆಟ್ಗೆ 283 ರನ್ ಪೇರಿಸಿ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 364 ರನ್ ಗುರಿ ಪಡೆದ ಕರ್ನಾಟಕ ತಂಡ 28 ಓವರ್ಗಳಲ್ಲಿ 3 ವಿಕೆಟ್ಗೆ 110 ರನ್ ಗಳಿಸಿದಾಗ ಉಭಯ ತಂಡಗಳ ನಾಯಕರು ಡ್ರಾಕ್ಕೆ ಸಮ್ಮತಿಸಿದರು.
ಆಗ ಆರ್. ಸ್ಮರಣ್ (35*) ಮತ್ತು ಮನೀಷ್ ಪಾಂಡೆ (30*) ಮುರಿಯದ 4ನೇ ವಿಕೆಟ್ಗೆ 42 ರನ್ ಸೇರಿಸಿ ಕ್ರೀಸ್ನಲ್ಲಿದ್ದರು. ಇದಕ್ಕೆ ಮುನ್ನ ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ (5) ಮತ್ತು ಕಿಶನ್ ಬಿದರೆ (5) ಬೇಗನೆ ಔಟಾದಾಗ ಕರ್ನಾಟಕಕ್ಕೆ ಸೋಲಿನ ಭೀತಿ ಹುಟ್ಟಿತ್ತು. ಆಗ ಸ್ಮರಣ್, ಶ್ರೇಯಸ್ ಗೋಪಾಲ್ (32) ಜತೆ 3ನೇ ವಿಕೆಟ್ಗೆ 56 ರನ್ ಜತೆಯಾಟವಾಡಿ ಚೇತರಿಕೆ ಒದಗಿಸಿದರು ಮತ್ತು ಡ್ರಾ ಆಸೆಗೆ ಬಲ ತುಂಬಿದರು.
ಕಾಡಿದ ಸುದೀಪ್-ಸಾಹ
ಕರ್ನಾಟಕ ತಂಡ ಬೆಳಗ್ಗೆ ಬಂಗಾಳ ತಂಡದ 2 ವಿಕೆಟ್ಗಳನ್ನು ಬೇಗನೆ ಕಬಳಿಸಿದಾಗ ಗೆಲುವಿಗೆ ಪ್ರಯತ್ನಿಸುವ ನಿರೀೆ ಮೂಡಿತು. ಶಾಬಾಜ್ ಅಹ್ಮದ್ (18) ಮತ್ತು ಅವಿಲಿನ್ ಘೋಷ್ಗೆ (5) ವಿದ್ಯಾಧರ್ ಪಾಟೀಲ್ (53ಕ್ಕೆ 3) ಪೆವಿಲಿಯನ್ ದಾರಿ ತೋರಿಸಿದರು. ಆದರೆ ಆಗ ಜತೆಗೂಡಿದ ಸುದೀಪ್ ರಮಿ ಮತ್ತು ವೃದ್ಧಿಮಾನ್ ಸಾಹ ಮುರಿಯದ 6ನೇ ವಿಕೆಟ್ಗೆ 123 ರನ್ ಸೇರಿಸಿ ರಾಜ್ಯ ತಂಡದ ಆಸೆಗೆ ತಣ್ಣೀರು ಎರಚಿದರು. ಸುದೀಪ್ ರಮಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 5ನೇ ಶತಕ ಪೂರೈಸಿದ ಬಳಿಕವೇ ಬಂಗಾಳ ಡಿಕ್ಲೇರ್ ಘೋಷಿಸಿತು.
ಬಂಗಾಳ: 301 ಮತ್ತು 81.4 ಓವರ್ಗಳಲ್ಲಿ 5 ವಿಕೆಟ್ಗೆ 283 ಡಿಕ್ಲೇರ್ (ಸುದೀಪ್ ರಮಿ 101*, ಶಾಬಾಜ್ 18, ಅವ್ಲಿನ್ 5, ವೃದ್ಧಿಮಾನ್ ಸಾಹ 63*, ವಿದ್ಯಾಧರ್ 53ಕ್ಕೆ 3), ಕರ್ನಾಟಕ: 221 ಮತ್ತು 28 ಓವರ್ಗಳಲ್ಲಿ 3 ವಿಕೆಟ್ಗೆ 110 (ಮಯಾಂಕ್ 5, ಕಿಶನ್ ಬಿದರೆ 5, ಆರ್. ಸ್ಮರ್ಣ್ 35*, ಶ್ರೇಯಸ್ 32, ಮನೀಷ್ ಪಾಂಡೆ 30*, ಸೂರಜ್ ಜೈಸ್ವಾಲ್ 27ಕ್ಕೆ 3). ಪಂದ್ಯಶ್ರೇಷ್ಠ: ಅನುಷ್ಟುಪ್ ಮಜುಮ್ದಾರ್.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ಉತ್ತರ ಪ್ರದೇಶ
ಯಾವಾಗ: ನವೆಂಬರ್ 13-16
ಎಲ್ಲಿ: ಲಖನೌ