ಕ್ರೀಡೆ

ಸರ್ಫ್ರಾಜ್ ಶೈನಾದರೂ ಸೋಲಿನ ಸುಳಿಯಲ್ಲಿ ಭಾರತ; ಕೊನೇ ದಿನ ಕಾಪಾಡುವುದೇ ಮಳೆ?

ಗುರುರಾಜ್ ಬಿ. ಎಸ್. ಬೆಂಗಳೂರು
ಯುವ ಬ್ಯಾಟರ್ ಸರ್ಫ್ರಾಜ್ ಖಾನ್ (150 ರನ್, 195 ಎಸೆತ, 18 ಬೌಂಡರಿ, 3 ಸಿಕ್ಸರ್) ಸಿಡಿಸಿದ ಚೊಚ್ಚಲ ಶತಕ ಹಾಗೂ ವಿಕೆಟ್ ಕೀಪರ್- ಬ್ಯಾಟರ್ ರಿಷಭ್ ಪಂತ್ (99 ರನ್, 105 ಎಸೆತ, 9 ಬೌಂಡರಿ, 5 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಸಾಹಸದ ನಡುವೆಯೂ ಕೆೆಳಕ್ರಮಾಂಕದ ದಿಢೀರ್ ಕುಸಿತದಿಂದಾಗಿ ಭಾರತ ತಂಡ ತವರಿನ ಅಂಗಣದಲ್ಲಿ ಸೋಲಿನ ಭೀತಿ ಎದುರಿಸಿದೆ. ವೇಗಿಗಳಾದ ವಿಲಿಯಂ ಓರ್ರೌ (92ಕ್ಕೆ3) ಹಾಗೂ ಮ್ಯಾಟ್ ಹೆನ್ರಿ (102ಕ್ಕೆ 3) ಸಂಘಟಿತ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 107 ರನ್​ಗಳ ಅಲ್ಪ ಗುರಿ ಪಡೆದಿದ್ದು, ಭಾರತದ ನೆಲದಲ್ಲಿ 36 ವರ್ಷಗಳ ಬಳಿಕ ಟೆಸ್ಟ್ ಗೆಲುವು ದಾಖಲಿಸುವ ಹಂಬಲದಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್​ಗೆ 231 ರನ್​ಗಳಿಂದ 4ನೇ ದಿನದಾಟ ಆರಂಭಿಸಿದ ಭಾರತ, ಸರ್ಫ್ರಾಜ್-ಪಂತ್ ನಡೆಸಿದ ಅದ್ಬುತ ಜತೆಯಾಟದ ನೆರವಿನಿಂದ ಒಂದು ಹಂತದಲ್ಲಿ 3 ವಿಕೆಟ್​ಗೆ 403 ರನ್​ಗಳಿಸಿ ಸುಸ್ಥಿತಿಯಲ್ಲಿತ್ತು. ಆಗ ಮಳೆ ಅಡಚಣೆ ತಂದಿತು. ಭೋಜನ ವಿರಾಮದ ಬಳಿಕ ಕುಸಿತ ಕಂಡ ಭಾರತ 99.3 ಓವರ್​ಗಳಲ್ಲಿ 462 ರನ್​ಗಳಿಗೆ ದ್ವಿತೀಯ ಇನಿಂಗ್ಸ್ ಮುಗಿಸಿದೆ. ಸಂಜೆ ಕಿವೀಸ್ ಗೆಲುವಿನ ಗುರಿ ಬೆನ್ನಟ್ಟಲು ಮೈದಾನಕ್ಕಿಳಿದಾಗ ಮಂದ ಬೆಳಕು ಹಾಗೂ ಮಳೆ ಅಡಚಣೆ ತಂದಿತು. ಇದರಿಂದ ದಿನದ ಆಟವನ್ನು ಬೇಗನೆ ನಿಲ್ಲಿಸಲಾಯಿತು. ದಿನದಂತ್ಯಕ್ಕೆ ಎರಡನೇ ಸರದಿಯಲ್ಲಿ 4 ಎಸೆತಗಳನ್ನಷ್ಟೇ ಎದುರಿಸಿರುವ ಕಿವೀಸ್ ಒಂದೂ ರನ್ ಗಳಿಸಿಲ್ಲ. ಅಂತಿಮ ದಿನ 107 ರನ್ ಗಳಿಸಬೇಕಿದ್ದು, ನಾಯಕ ಟಾಮ್ ಲಾಥಮ್ ಹಾಗೂ ಡೆವೋನ್ ಕಾನ್​ವೇ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈಗಾಗಲೆ 1 ಡಿಆರ್​ಎಸ್ ಕಳೆದು ಕೊಂಡಿರುವ ರೋಹಿತ್ ಪಡೆ ಅಚ್ಚರಿಯ ಗೆಲುವು ಸಾಧಿಸಲು ಭಾನುವಾರ 10 ವಿಕೆಟ್​ಗಳು ಅಗತ್ಯವಿದೆ. ಬೌಲರ್​ಗಳು ಪವಾಡ ಸೃಷ್ಟಿಸಿದರೆ ಮಾತ್ರ ಗೆಲುವು ಸಾಧ್ಯ ಎನಿಸಿದೆ. ಅಥವಾ ಮಳೆ ಇಡೀ ದಿನ ಸುರಿದರೆ ಕನಿಷ್ಠ ಡ್ರಾ ಸಾಧಿಸಿ, ಸೋಲಿನಿಂದ ಪಾರಾಗಬಹುದು. ಟೀಮ್ ಇಂಡಿಯಾ ಟೆಸ್ಟ್​ನಲ್ಲಿ ಯಶಸ್ವಿಯಾಗಿ ರಕ್ಷಿಸಿಕೊಂಡ ಕನಿಷ್ಠ ಮೊತ್ತ 107 ರನ್​ಗಳೇ ಆಗಿದ್ದು, 2004ರಲ್ಲಿ ಆಸ್ಟ್ರೇಲಿಯಾ ಎದುರು ವಾಂಖೆಡೆಯಲ್ಲಿ ಈ ಸಾಧನೆ ಮಾಡಿತ್ತು.

ರಾಹುಲ್ ಮತ್ತೆ ವಿಫಲ, ದಿಢೀರ್ ಕುಸಿತ: ಹೊಸ ಚೆಂಡಿನಲ್ಲಿ ದಾಳಿಗಿಳಿದ ಟಿಮ್ ಸೌಥಿ 85ನೇ ಓವರ್​ನ ಮೊದಲ ಎಸೆತದಲ್ಲಿ ಸರ್ಫ್ರಾಜ್-ಪಂತ್ ಜೋಡಿಯನ್ನು ಬೇರ್ಪಡಿ ಕಿವೀಸ್​ಗೆ ಮೇಲುಗೈ ತಂದರು. ಸರ್ಫ್ರಾಜ್ ನಿರ್ಗಮನದ ಬಳಿಕ ಪಂತ್ ಜತೆಯಾದ ಸ್ಥಳೀಯ ಪ್ರತಿಭೆ ಕೆಎಲ್ ರಾಹುಲ್ (12) ಮತ್ತೆ ನಿರಾಸೆ ಮೂಡಿಸಿದರು. ಇವರಿಬ್ಬರು 5ನೇ ವಿಕೆಟ್​ಗೆ 24 ಎಸೆತದಲ್ಲಿ 25 ರನ್​ಗಳಿಸಿದರು. ಇಂಜುರಿಯಿಂದಾಗಿ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪಂತ್, 107 ಮೀಟರ್​ನ ಸಿಕ್ಸರ್ ಸಿಡಿಸಿದರು. ಆದರೆ ನರ್ವಸ್ ನೈಂಟಿಯಲ್ಲಿ ಬೌಲ್ಡ್ ಆಗಿ ಶತಕ ವಂಚಿತರೆನಿಸಿದರು. ಬಳಿಕ ರಾಹುಲ್ ಸಹ ಕೀಪರ್​ಗೆ ಕ್ಯಾಚಿತ್ತರು. ಚಹಾ ವಿರಾಮದ ಬಳಿಕ ಭಾರತದ ಕೆಳಕ್ರಮಾಂಕ ದಿಢೀರ್ ಕುಸಿತ ಕಂಡಿತು. ಕೊನೇ 7 ವಿಕೆಟ್​ಗಳನ್ನು ಕೇವಲ 54 ರನ್​ಗಳಿಗೆ ಕೈಚೆಲ್ಲಿತು. ರವೀಂದ್ರ ಜಡೇಜಾ (5), ಆರ್.ಅಶ್ವಿನ್ (15), ಜಸ್​ಪ್ರೀತ್ ಬುಮ್ರಾ (0) ಹಾಗೂ ಮೊಹಮದ್ ಸಿರಾಜ್ (0) ಔಟಾಗುವುದರೊಂದಿಗೆ ಭಾರತದ ಬ್ಯಾಟರ್​ಗಳ ಹೋರಾಟ ಅಂತ್ಯಗೊಂಡಿತು.

ಸರ್ಫ್ರಾಜ್-ಪಂತ್ ದಿಟ್ಟ ಆಟ: ಮೂರನೇ ದಿನದಂತ್ಯಕ್ಕೆ 70 ರನ್​ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸರ್ಫ್ರಾಜ್ ಖಾನ್ ಜತೆಯಾಗಿ ರಿಷಭ್ ಪಂತ್ ಬೆಳಗ್ಗೆ ಆಟ ಆರಂಭಿಸಿದರು. ಉತ್ತಮ ಲಯದಲ್ಲಿದ್ದ ಸರ್ಫ್ರಾಜ್​ಗೆ ಸಮರ್ಥ ಸಾಥ್ ನೀಡಿದ ಪಂತ್ ರನ್​ಗಳಿಕೆಗೆ ಚುರುಕು ನೀಡಿದರು. ಇವರಿಬ್ಬರ ಬ್ಯಾಟಿಂಗ್ ವೇಳೆ ಭಾರತಕ್ಕೆ ರನ್ ಕೊರತೆ ಇರಲಿಲ್ಲ. ಶುಭಮಾನ್ ಗಿಲ್ ಗೈರಿನಲ್ಲಿ ಅವಕಾಶ ಪಡೆದ ಸರ್ಫ್ರಾಜ್, ದೇಶೀಯ ಟೂರ್ನಿಯ ಕನಸಿನ ಓಟವನ್ನು ಭಾರತದ ಪರವೂ ಮುಂದುವರಿಸಿದರು. ಇವರಿಬ್ಬರು 4ನೇ ವಿಕೆಟ್​ಗೆ 211 ಎಸೆತಗಳಲ್ಲಿ 177 ರನ್ ಕಸಿದರು. ಮಳೆಯ ಕಾಮೋಡದ ನಡುವೆ ಸರ್ಫ್ರಾಜ್-ಪಂತ್ ಜತೆಯಾಟ ಭಾರತದ ಹಿನ್ನಡೆ ತಗ್ಗಿಸಿ, ಬಲ ತುಂಬಿತು. 2016ರಲ್ಲಿ 19 ವಯೋಮಿತಿಯ ಭಾರತ ತಂಡದಲ್ಲಿ ಇವರಿಬ್ಬರು ಜತೆಯಾಗಿ ಆಡಿದ ಅನುಭವ ಹೊಂದಿದ್ದರು. ಸರ್ಫ್ರಾಜ್ 110 ಎಸೆತಗಳಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿ, ಅಂಗಣದಲ್ಲಿ ಜಿಗಿದು ಸಂಭ್ರಮಿಸಿದರು. ಪಂತ್ 55 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇವರಿಬ್ಬರ ಆಟಕ್ಕೆ ಕಿವೀಸ್ ಬೌಲರ್​ಗಳು ಹೈರಾಣಗೊಂಡರು. ಮಳೆ ಬ್ರೇಕ್​ನ ಬಳಿಕ 74ನೇ ಓವರ್​ನಲ್ಲಿ ಭಾರತ ಮುನ್ನಡೆ ಗಳಿಸಿತು.

4ನೇ ದಿನ ಮತ್ತೆ ಕಾಡಿದ ಮಳೆ: ಪಂದ್ಯದ ಮೊದಲ ದಿನ ಒಂದೂ ಎಸೆತವಿಲ್ಲದೆ ರದ್ದುಗೊಂಡರೆ, 2ನೇ ದಿನ ಕೆಲ ಹೊತ್ತು ಜಿಟಿ ಮಳೆ ಅಡಚಣೆ ತಂದಿತ್ತು. 4ನೇ ದಿನ ಭಾರತ ತಂಡ 71 ಓವರ್​ಗಳಲ್ಲಿ 3 ವಿಕೆಟ್​ಗೆ 344 ರನ್​ಗಳಿಸಿದಾಗ ಮತ್ತೆ ಸುರಿದ ಮಳೆಯಿಂದಾಗಿ 2 ಗಂಟೆ 45 ನಿಮಿಷ ಆಟ ನಡೆಯಲಿಲ್ಲ. ಆಗ ಭಾರತ ಕೇವಲ 12 ರನ್​ಗಳಿಂದ ಹಿನ್ನಡೆಯಲ್ಲಿತ್ತು. ಇದರ ನಡುವೆಯೇ ನಿಗದಿತ ಸಮಯಕ್ಕೂ ಮುನ್ನ ಭೋಜನ ವಿರಾಮ ಘೋಷಿಸಲಾಯಿತು. ಬಳಿಕ ಮಧ್ಯಾಹ್ನ 1.50ಕ್ಕೆ ಆಟ ಆರಂಭಗೊಂಡಿತು. ಇದರಿಂದ ದಿನದಾಟದಲ್ಲಿ 24 ಓವರ್​ಗಳ ಆಟ ನಷ್ಟವಾಯಿತು.

1: ಸರ್ಫ್ರಾಜ್ ಖಾನ್​ಗೆ ಚೊಚ್ಚಲ ಟೆಸ್ಟ್ ಶತಕ ಇದಾಗಿದ್ದು, ಪ್ರಥಮ ದರ್ಜೆಯಲ್ಲಿ 16ನೇ ಸೆಂಚುರಿ ಎನಿಸಿದೆ.

7: ರಿಷಭ್ ಪಂತ್ ಟೆಸ್ಟ್​ನಲ್ಲಿ 7ನೇ ಬಾರಿ ನರ್ವಸ್ ನೈಂಟಿಗೆ ಬಲಿಯಾದರು. ಸಚಿನ್ ತೆಂಡುಲ್ಕರ್ (10),ರಾಹುಲ್ ದ್ರಾವಿಡ್ (9) ಪಂತ್​ಗಿಂತ ಹೆಚ್ಚು ಸಲ ಈ ರೀತಿ ಔಟಾಗಿರುವ ಭಾರತೀಯರಾಗಿದ್ದಾರೆ.