ಕ್ರೀಡೆ

ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೂ ದುಲೀಪ್​ ಟ್ರೋಫಿಯಲ್ಲಿ ಆಡಲಿದ್ದಾರೆ ಸರ್ಫರಾಜ್​; ಹೀಗಿದೆ ಕಾರಣ

ಮುಂಬೈ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್​​ ಸರಣಿಯ ಮೊದಲ ಪಂದ್ಯಕ್ಕೆ ಈಗಾಗಲೇ ಟೀಮ್​​​ ಇಂಡಿಯಾನ್ನು ಪ್ರಕಟಿಸಲಾಗಿದ್ದು, ಕೆ.ಎಲ್. ರಾಹುಲ್​, ರಿಷಭ್​ ಪಂತ್, ಶುಭಮನ್​ ಗಿಲ್​​ ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ. ಆಕಾಶ್ ದೀಪ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಮತ್ತು ಸರ್ಫರಾಜ್​ ಖಾನ್​ನಂತಹ ಆಟಗಾರರಿಗೂ ಕೂಡ ಬಿಸಿಸಿಐ ಮಣೆ ಹಾಕಿದ್ದು, ಐಪಿಎಲ್​ನಲ್ಲಿ ಆರ್​ಸಿಬಿ ಪರ ಮಿಂಚಿದ್ದ ಸ್ಟಾರ್​ ವೇಗಿ ಯಶ್​ ದಯಾಳ್​ಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಿದೆ. ಆದರೆ, ಅವರು ಸರ್ಫರಾಜ್​ ಮತ್ತು ಯಶ್​ ದಯಾಳ್​ ಬಾಂಗ್ಲಾ ವಿರುದ್ಧದ ಸರಣಿಗೆ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.

ಹಾಲಿ ನಡೆಯುತ್ತಿರುವ ದುಲೀಪ್​ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಗಳಿಗೆ ಬಿಸಿಸಿಐ ಮಂಗಳವಾರ (ಸೆಪ್ಟೆಂಬರ್​ 10) ತಂಡವನ್ನು ಪ್ರಕಟಿಸಿದ್ದು, ಆಕಾಶ್ ದೀಪ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಮುಂತಾದವರಿಗೆ ಎರಡನೇ ಸುತ್ತಿನಿಂದ ವಿನಾಯ್ತಿ ನೀಡಲಾಗಿದೆ. ಆದರೆ, ಯಶ್ ದಯಾಳ್​ ಮತ್ತು ಸರ್ಫರಾಜ್​ಗೆ ಭಿನ್ನವಾಗಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು ಅವರಿಗೆ ತಂಡ ಕೂಡಿಕೊಳ್ಳುವ ಅವಕಾಶ ಇಲ್ಲ ಎಂದು ಹೇಳಲಾಗಿದೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡದ ಭಾಗವಾಗಿರುವ ಯಶ್​ ದಯಾಳ್​ ಹಾಗೂ ಸರ್ಫರಾಜ್​ರನ್ನು ದುಲೀಪ್​ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಈ ವಿಚಾರವು ಅವರು ಬಾಂಗ್ಲಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ್ದು, ಈ ಕಾರಣಕ್ಕಾಗಿ ಅವರನ್ನು ದುಲೀಪ್​ ಟ್ರೋಫಿ ಆಡುವಂತೆ ಸೂಚಿಸಿದೆ. ಟೀಮ್​ ಇಂಡಿಯಾದ ಭಾಗವಾಗಿರುವ ಯಶಸ್ವಿ ಜೈಸ್ವಾಲ್, ರಿಷಬ್ ಪಂತ್​ಗೆ ಬದಲಿ ಆಟಗಾರರಾಗಿ ಸುಯಶ್ ಪ್ರಭುದೇಸಾಯಿ ಮತ್ತು ರಿಂಕು ಸಿಂಗ್​ರನ್ನು ಹೆಸರಿಸಲಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ದುಲೀಪ್​ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಗಳಿಗೆ ಸರ್ಫರಾಜ್​ರನ್ನು ಆಯ್ಕೆ ಮಾಡಿರುವುದರಿಂದ ಕೆ.ಎಲ್​. ರಾಹುಲ್​ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 2022ರ ಡಿಸೆಂಬರ್​ ಬಳಿಕ ಪಂತ್​ ರೆಡ್​ಬಾಲ್​ ಕ್ರಿಕೆಟ್​ಗೆ ಮರಳುತ್ತಿದ್ದು, ಈ ಕಾರಣಕ್ಕಾಗಿ ಸರ್ಫರಾಜ್​ ಹಾಗೂ ಯಶ್​ ದಯಾಳ್​ರನ್ನು ದುಲೀಪ್​ ಟ್ರೋಫಿ ಆಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.