ಕ್ರೀಡೆ

ಇರಾನಿ ಕಪ್​: ಶೇಷ ಭಾರತಕ್ಕೆ ಋತುರಾಜ್​ ಸಾರಥ್ಯ; ಇಬ್ಬರು ಕನ್ನಡಿಗರಿಗೆ ಸ್ಥಾನ

ಬೆಂಗಳೂರು: ರಣಜಿ ಚಾಂಪಿಯನ್​ ಮುಂಬೈ ವಿರುದ್ಧ ಲಖನೌದ ಏಕನಾ ಸ್ಟೇಡಿಯಂನಲ್ಲಿ ಅಕ್ಟೋಬರ್​ 1ರಿಂದ 5ರವರೆಗೆ ನಡೆಯಲಿರುವ ಇರಾನಿ ಕಪ್​ ಪಂದ್ಯದಲ್ಲಿ ಋತುರಾಜ್​ ಗಾಯಕ್ವಾಡ್​ ಶೇಷ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಮನ್ಯು ಈಶ್ವರನ್​ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಎಡಗೈ ಬ್ಯಾಟರ್​ ದೇವದತ್​ ಪಡಿಕ್ಕಲ್​ ಮತ್ತು ವೇಗಿ ಪ್ರಸಿದ್ಧ ಕೃಷ್ಣ ತಂಡದಲ್ಲಿರುವ ಇಬ್ಬರು ಕನ್ನಡಿಗರಾಗಿದ್ದಾರೆ. ಇಶಾನ್​ ಕಿಶನ್​ ಕೀಪರ್​ ಆಗಿ ಸ್ಥಾನ ಪಡೆದಿರುವುದರಿಂದ, ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಶೇಷ ಭಾರತ ತಂಡದಲ್ಲಿರದ ಸಂಜು ಸ್ಯಾಮ್ಸನ್​, ಟಿ20 ತಂಡದಲ್ಲಿ ಕೀಪರ್​ ಆಗಿ ಆಡಲಿದ್ದಾರೆ ಎನ್ನಲಾಗಿದೆ.

ಶೇಷ ಭಾರತ ತಂಡ: ಋತುರಾಜ್​ ಗಾಯಕ್ವಾಡ್​ (ನಾಯಕ), ಅಭಿಮನ್ಯು ಈಶ್ವರನ್​ (ಉಪನಾಯಕ), ಸಾಯಿ ಸುದರ್ಶನ್​, ದೇವದತ್​ ಪಡಿಕ್ಕಲ್​, ಧ್ರುವ ಜುರೆಲ್​ (ವಿ.ಕೀ), ಇಶಾನ್​ ಕಿಶನ್​ (ವಿ.ಕೀ), ಮಾನವ್​ ಸುಥರ್​, ಸಾರಾಂಶ್​ ಜೈನ್​, ಪ್ರಸಿದ್ಧ ಕೃಷ್ಣ, ಮುಕೇಶ್​ ಕುಮಾರ್​, ಯಶ್​ ದಯಾಳ್​, ರಿಕಿ ಭುಯಿ, ಶಾಶ್ವತ್​ ರಾವತ್​, ಖಲೀಲ್​ ಅಹ್ಮದ್​, ರಾಹುಲ್​ ಚಹರ್​.

ಕಾನ್ಪುರ ಟೆಸ್ಟ್​ ಆಡದಿದ್ದರೆ ಇರಾನಿಗೆ ಜುರೆಲ್​, ದಯಾಳ್​
ವಿಕೆಟ್​ ಕೀಪರ್​-ಬ್ಯಾಟರ್​ ಧ್ರುವ ಜುರೆಲ್​ ಮತ್ತು ವೇಗಿ ಯಶ್​ ದಯಾಳ್​ ಭಾರತ ಟೆಸ್ಟ್​ ತಂಡದಲ್ಲಿರುವ ನಡುವೆಯೂ ಶೇಷ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಶುಕ್ರವಾರದಿಂದ ಕಾನ್ಪುರದಲ್ಲಿ ನಡೆಯಲಿರುವ ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದಿದ್ದರೆ ಮಾತ್ರ ಇವರಿಬ್ಬರು ಲಖನೌಗೆ ತೆರಳಿ ಇರಾನಿ ಕಪ್​ನಲ್ಲಿ ಆಡಲಿದ್ದಾರೆ. ಒಂದು ವೇಳೆ ಪಂದ್ಯದ ನಡುವೆ ಪಂತ್​ ಗಾಯಗೊಂಡರೂ, ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​ ನಿರ್ವಹಿಸಬಲ್ಲವರು ಆಗಿರುವುದರಿಂದ ಜುರೆಲ್​ ಟೆಸ್ಟ್​ ತಂಡದಿಂದ ಬಿಡುಗಡೆಯಾಗಲಿದ್ದಾರೆ. ಇನ್ನು ಬ್ಯಾಟರ್​ ಸರ್ಫ್ರಾಜ್​​ ಖಾನ್​ ಕೂಡ 2ನೇ ಟೆಸ್ಟ್​ನಲ್ಲಿ ಆಡದಿದ್ದರೆ ಮುಂಬೈ ಪರ ಇರಾನಿ ಕಪ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಮುಂಬೈಗೆ ರಹಾನೆ ಸಾರಥ್ಯ
ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ ಇರಾನಿ ಕಪ್​ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಶಾರ್ದೂಲ್​ ಠಾಕೂರ್​ ಗಾಯದಿಂದ ಚೇತರಿಸಿಕೊಂಡು ಮರಳಿ ಕಣಕ್ಕಿಳಿಯಲಿದ್ದಾರೆ. ಜತೆಗೆ ಶ್ರೇಯಸ್​ ಅಯ್ಯರ್​, ಪೃಥ್ವಿ ಷಾ, ಮುಶೀರ್​ ಖಾನ್​, ಶಮ್ಸ್​ ಮುಲಾನಿ, ತನುಷ್​ ಕೋಟ್ಯಾನ್​ ಸಹಿತ ಪ್ರಮುಖ ಆಟಗಾರರೆಲ್ಲ ಆಡಲಿದ್ದಾರೆ. ಆದರೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಮತ್ತು ಆಲ್ರೌಂಡರ್​ ಶಿವಂ ದುಬೆ ಮಾತ್ರ ಮುಂಬೈಗೆ ಅಲಭ್ಯರಾಗಿದ್ದಾರೆ. ಇವರಿಬ್ಬರು ಅಕ್ಟೋಬರ್​ 3ರಿಂದ ಬಾಂಗ್ಲಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.