ಕ್ರೀಡೆ

ವಿಶ್ವಕಪ್​ನಲ್ಲಿ ಅಜೇಯ ಪಟ್ಟ ಕಾಯ್ದುಕೊಳ್ಳಲು ಇಂದು ಭಾರತ-ಕಿವೀಸ್​ ಕಾದಾಟ

ಧರ್ಮಶಾಲಾ: ಏಕದಿನ ವಿಶ್ವಕಪ್​ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಕಳೆದ 20 ವರ್ಷಗಳಿಂದ ಕಿವೀಸ್​ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆಯನ್ನೂ ನೀಗಿಸುವ ಸವಾಲು ಕೂಡ ರೋಹಿತ್​ ಶರ್ಮ ಬಳಗದ ಮುಂದಿದೆ.

ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅಲಭ್ಯಕ್ಕೆ ಈ ಮಹತ್ವದ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಗೈರಿನಲ್ಲಿ 6ನೇ ಬೌಲರ್​ ಕೊರತೆ ಕಾಡದಂತೆ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಬಲ ಕುಗ್ಗದಂತೆ ಆಡುವ 11ರ ಬಳಗವನ್ನು ರೂಪಿಸುವ ಸವಾಲು ನಾಯಕ ರೋಹಿತ್​ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಮುಂದಿದೆ.

ಕಿವೀಸ್​ ತಂಡ ಟೂರ್ನಿಯಲ್ಲೇ ಅತ್ಯಂತ ವೈವಿಧ್ಯತೆಯಿಂದ ಕೂಡಿದ ವೇಗ-ಸ್ಪಿನ್​ ಬೌಲಿಂಗ್​ ವಿಭಾಗವನ್ನು ಹೊಂದಿದ್ದರೆ, ಇತ್ತ ಭಾರತದ ಬ್ಯಾಟರ್​ಗಳಾದ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಈ ಮುಖಾಮುಖಿ ರೋಚಕವಾಗಿರುವ ನಿರೀೆ ಇದೆ. ಭಾರತಕ್ಕೆ ಗೆದ್ದರೆ ಕಿವೀಸ್​ ತಂಡವನ್ನು ಹಿಮ್ಮೆಟ್ಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ. ಅಲ್ಲದೆ ಈ ಗೆಲುವು ತಂಡವನ್ನು ಸೆಮಿೈನಲ್​ ಸನಿಹಕ್ಕೂ ಕೊಂಡೊಯ್ಯಲಿದೆ.

ಟೀಮ್​ ನ್ಯೂಸ್​:

ಭಾರತ: ಹಾರ್ದಿಕ್​ ಪಾಂಡ್ಯ ಗೈರಿನಲ್ಲಿ ಕಿವೀಸ್​ ವಿರುದ್ಧ ಆಡುವ 11ರ ಬಳಗದ ಸಮತೋಲನಕ್ಕಾಗಿ ಭಾರತ ತಂಡ ಕಷ್ಟ ಪಡಲಿದೆ. ಹಾರ್ದಿಕ್​ ಸ್ಥಾನ ತುಂಬಬಲ್ಲ ವೇಗದ ಬೌಲಿಂಗ್​ ಆಲ್ರೌಂಡರ್​ ತಂಡದಲ್ಲಿ ಬೇರೆ ಯಾರೂ ಇಲ್ಲ. ಮತ್ತೊಂದೆಡೆ 3ನೇ ವೇಗಿಯಾಗಿ ಶಾರ್ದೂಲ್​ ಠಾಕೂರ್​ ಪರಿಣಾಮಕಾರಿ ಎನಿಸುತ್ತಿಲ್ಲ. ಹೀಗಾಗಿ 3ನೇ ವೇಗಿಯಾಗಿ ಮೊಹಮದ್​ ಶಮಿ ಅವರನ್ನು ಆಡಿಸಿ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ವಿಭಾಗಕ್ಕೂ ಬಲ ತುಂಬಲು ಸೂರ್ಯಕುಮಾರ್​ ಯಾದವ್​ ಅಥವಾ ಇಶಾನ್​ ಕಿಶನ್​ರನ್ನು ಆಡಿಸುವ ನಿರೀಕ್ಷೆ ಇದೆ.

ನ್ಯೂಜಿಲೆಂಡ್​: ಭಾರತದಂತೆ ಕಿವೀಸ್​ಗೂ ಗಾಯದ ಹಿನ್ನಡೆಯೊಂದಿದೆ. ಹಾರ್ದಿಕ್​ರಂತೆ ನಾಯಕ ಕೇನ್​ ವಿಲಿಯಮ್ಸನ್​ ಕೂಡ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೇ ಕೈ ಹೆಬ್ಬೆರಳು ಗಾಯಕ್ಕೊಳಗಾಗಿದ್ದು, ಸೆಮೀಸ್​ವರೆಗೂ ಬಹುತೇಕ ಅಲಭ್ಯರಾಗಿದ್ದಾರೆ. ಆದರೆ ಡೆವೊನ್​ ಕಾನ್​ವೇ, ಡೆರಿಲ್​ ಮಿಚೆಲ್​, ಬೆಂಗಳೂರು ಮೂಲದ ರಚಿನ್​ ರವೀಂದ್ರ ಉತ್ತಮ ಾಮ್​ರ್ನಲ್ಲಿರುವುದರಿಂದ ಮತ್ತು ಟಾಮ್​ ಲಾಥಮ್​ ಹಂಗಾಮಿ ನಾಯಕರಾಗಿ ಯಶಸ್ಸು ಕಂಡಿರುವುದರಿಂದ ಕೇನ್​ ಗೈರು ಅಷ್ಟಾಗಿ ಕಾಡದು.

ಏಕದಿನ ಮುಖಾಮುಖಿ: 116

ಭಾರತ: 58

ನ್ಯೂಜಿಲೆಂಡ್​: 50

ಟೈ: 1, ರದ್ದು: 7

ವಿಶ್ವಕಪ್​ ಮುಖಾಮುಖಿ: 9

ಭಾರತ: 3

ನ್ಯೂಜಿಲೆಂಡ್​: 5

ರದ್ದು: 1

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​