ಕ್ರೀಡೆ

ಲಖನೌ ನಾಯಕತ್ವವನ್ನು ತೊರೆಯಲಿದ್ದಾರ ರಾಹುಲ್​?; ಹೀಗಿದೆ ಕಾರಣ

ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ಭರ್ಜರಿ ಜಯ ಸಾಧಿಸಿದ್ದು, ಎದುರಾಳಿ ತಂಡ ನೀಡಿದ ಗುರಿಯನ್ನು 9.4 ಓವರ್​ಗಳಲ್ಲಿ ಬೆನ್ನತ್ತುವ ಮೂಲಕ ಏಕಪಕ್ಷೀಯವಾಗಿ ಪಂದ್ಯವನ್ನು ಹೈದರಾಬಾದ್​ ಬ್ಯಾಟ್ಸ್​ಮನ್​ಗಳು ಗೆಲ್ಲಿಸಿಕೊಟ್ಟರು.

ಪಂದ್ಯ ಮುಗಿದ ಬಳಿಕ ಲಖನೌ ತಂಡದ ಮಾಲೀಕ ಸಂಜೀವ್​ ಗೋಯೆಂಕಾ ನಾಯಕ ರಾಹುಲ್​ ಬಳಿ ಮೈದಾನದಲ್ಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ರಾಹುಲ್​ ಲಖನೌ ತಂಡವನ್ನು ತೊರೆಯಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಸದ್ಯ ಕೇಳಿ ಬಂದಿರುವ ಪ್ರಕಾರ ರಾಹುಲ್​ ಲಖನೌ ತಂಡದ ನಾಯಕತ್ವವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದೆ.

ಐಪಿಎಲ್​​ನಲ್ಲಿ ಮೂರು ಆವೃತ್ತಿಗಳನ್ನು ಆಡಿರುವ ಎಲ್​ಎಸ್​ಜಿ ತಂಡವು 2022 ಹಾಗೂ 2023ರಲ್ಲಿ ಪ್ಲೇಆಫ್​ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಹಾಗೆ ನೋಡುವುದಾದರೆ ಆರ್​ಸಿಬಿ, ಡೆಲ್ಲಿ, ಪಂಜಾಬ್ ಕಳೆದ 17 ಆವೃತ್ತಿಗಳಿಂದಲೂ ಐಪಿಎಲ್​ ಆಡುತ್ತಿದ್ದು, ಈ ತಂಡಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡದ ಮಾಲೀಕರು ಒಮ್ಮೆಯೂ ನಾಯಕನ ಬಳಿ ಬಹಿರಂಗವಾಗಿ ಹೀಗೆ ನಡೆದುಕೊಂಡಿಲ್ಲ. ಇತ್ತ ಸಂಜೀವ್​ ಗೋಯೆಂಕಾ ನಡೆ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಂಜೀವ್​ ಗೋಯೆಂಕಾ ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಇದೇ ಮೊದಲೇನಲ್ಲ. 2016-17ರಲ್ಲಿ ರೈಸಿಂಗ್​ ಪುಣೆ ಸೂಪರ್​ಜೈಂಟ್ಸ್​ ತಂಡದ ಮಾಲೀಕರಾಗಿದ್ದ ಸಂಜೀವ್​ ಅವರು ಎಂ.ಎಸ್. ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಮೂಲಕ ಸುದ್ದಿಯಾಗಿದ್ದರು. 2016ರಲ್ಲಿ ಐಪಿಎಲ್​ ಪದಾರ್ಪಣೆ ಮಾಡಿದ ಆರ್​ಪಿಎಸ್​ ತಂಡವು ಎಂಎಸ್ ಧೋನಿಯನ್ನು ನಾಯಕರನ್ನಾಗಿ ಮಾಡಿತ್ತು. ಆದರೆ ಧೋನಿ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. 2017ರಲ್ಲಿ ಧೋನಿಯನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ ಸ್ಟೀವ್ ಸ್ಮಿತ್​ರನ್ನು ನಾಯಕರನ್ನಾಗಿ ನೇಮಿಸಿದ್ದರು. ಇದಾದ ನಂತರ ತಂಡ ಫೈನಲ್​ ಪ್ರವೇಶಿತ್ತು ಆದರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಲೀಗ್ ಹಂತದಲ್ಲಿ ಉಳಿದಿರುವ ಎರಡು ಪಂದ್ಯಗಳ ನಾಯಕತ್ವದಿಂದ ರಾಹುಲ್ ಕೆಳಗಿಳಿಯುವ ಸಾಧ್ಯತೆಗಳಿವೆ. ಆ ನಂತರ ತಂಡದಿಂದಲೂ ಹೊರನಡೆಯುತ್ತಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಘಟನೆ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.