ಕ್ರೀಡೆ

ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ರನ್​, ವಿಕೆಟ್​ ಪಡೆಯುವ ಆಟಗಾರರಿವರು! ಬಂಗಾರ್​ ಲಿಸ್ಟ್​ನಲ್ಲಿಲ್ಲ ಕೊಹ್ಲಿ, ಬಾಬರ್​... | Champions Trophy

Champions Trophy: ಇದೇ ಫೆ.19ರಿಂದ ಆತಿಥೇಯ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್​, ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಸೇರಿದಂತೆ ಒಟ್ಟು 8 ತಂಡಗಳು 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಸೆಣಸಾಡಲಿವೆ. ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಯಾರು ಅತೀ ಹೆಚ್ಚು ರನ್​ ಸ್ಕೋರ್​ ಮಾಡುತ್ತಾರೆ ಮತ್ತು ಯಾರು ಅತ್ಯಧಿಕ ವಿಕೆಟ್​ಗಳನ್ನು ಕಬಳಿಸುತ್ತಾರೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್​ ಬಂಗಾರ್​ ಭವಿಷ್ಯ ನುಡಿದಿದ್ದಾರೆ.

ಇಬ್ಬರು ಭಾರತೀಯ ಆಟಗಾರರು

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಮತ್ತು ವಿಕೆಟ್ ಕಬಳಿಸುವ ಬೌಲರ್ ಯಾರು ಎಂದು ಹೆಸರಿಸಲು ಸಂಜಯ್ ಬಂಗಾರ್​ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಕ್ರಿಕೆಟ್​ ದಿಗ್ಗಜರ ಹೆಸರನ್ನು ಬದಿಗಿಟ್ಟು, ಯುವ ಹಾಗೂ ಸ್ಟಾರ್​ ಆಟಗಾರರನ್ನೇ ಆಯ್ಕೆ ಮಾಡಿಕೊಂಡಿರುವುದು ಕ್ರಿಕೆಟ್ ಪ್ರಿಯರ ಹುಬ್ಬೇರಿಸಿದೆ. ಟೀಮ್ ಇಂಡಿಯಾ ದಿಗ್ಗಜ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಸೇರಿದಂತೆ ಪಾಕಿಸ್ತಾನದ ಬಾಬರ್ ಆಜಮ್​, ಬೌಲರ್ ಶಾಹೀನ್​ರನ್ನು ಕೈಬಿಟ್ಟು ಭಾರತ ತಂಡದ ಇಬ್ಬರು ಭರವಸೆಯ ಆಟಗಾರರ ಹೆಸರನ್ನು ಸೂಚಿಸಿದ್ದಾರೆ.

"ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಮನ್ ಗಿಲ್ ಅತಿ ಹೆಚ್ಚು ರನ್ ಗಳಿಸುವ ಮತ್ತು ಕುಲದೀಪ್ ಯಾದವ್ ಅತಿ ಹೆಚ್ಚು ವಿಕೆಟ್ ಪಡೆಯುವ ಆಟಗಾರರಾಗಿ ಹೊರಹೊಮ್ಮಲಿದ್ದಾರೆ" ಎಂದು ಭವಿಷ್ಯ ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ನಿಮ್ಮ ಅಭಿಪ್ರಾಯವನ್ನು ನಾನು ಗಿಲ್​ ವಿಚಾರದಲ್ಲಿ ಒಪ್ಪಿಕೊಳ್ಳುತ್ತೇನೆ. ಆದರೆ, ಕುಲದೀಪ್ ವಿಷಯದಲ್ಲಿ ಕೊಂಚ ಕಷ್ಟ ಎಂದರು.

"ಟೂರ್ನಿ ಪೂರ ಶುಬ್‌ಮನ್ ಗಿಲ್‌ಗೆ ಆಡಲು ಅವಕಾಶವಿದೆ. ಆದರೆ ಕುಲದೀಪ್ ಎಲ್ಲಾ ಪಂದ್ಯಗಳನ್ನು ಆಡುತ್ತಾರೆ ಎಂಬುದು ನನಗೆ ಖಚಿತವಿಲ್ಲ. ವಾಸ್ತವವಾಗಿ, ಬಾಂಗ್ಲಾದೇಶ ವಿರುದ್ಧದ ಆರಂಭಿಕ ಪಂದ್ಯದಲ್ಲೇ ಅವರು ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ" ಎಂದು ಚೋಪ್ರಾ ಹೇಳಿದರು,(ಏಜೆನ್ಸೀಸ್).