ಕ್ರೀಡೆ

ಮಹಾರಾಜ ಟ್ರೋಫಿ 2025: ರಾಹುಲ್​ ದ್ರಾವಿಡ್​ ಪುತ್ರನಿಗೆ ಬಿಗ್​ ಶಾಕ್​: ಪಡಿಕ್ಕಲ್​ಗೆ ಬಂಪರ್​! Samit Dravid

Samit Dravid : ಆಗಸ್ಟ್​ 11ರಿಂದ 27ರವರೆಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯ ಹರಾಜು ಪ್ರಕ್ರಿಯೆ ಮಂಗಳವಾರ (ಜುಲೈ 15) ಬೆಂಗಳೂರಿನಲ್ಲಿ ನಡೆಯಿತು.

ಈ ಹರಾಜಿನಲ್ಲಿ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಒಟ್ಟು ಆರು ಫ್ರಾಂಚೈಸಿಗಳು ತಮ್ಮ ಅಪೇಕ್ಷಿತ ಆಟಗಾರರನ್ನು ಖರೀದಿಸಿದವು.

ಈ ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ದೊಡ್ಡ ಮೊತ್ತಕ್ಕೆ ಸೇಲ್​ ಆದರು. ಹುಬ್ಬಳ್ಳಿ ಟೈಗರ್ಸ್ ಅವರನ್ನು ದಾಖಲೆಯ 13.20 ಲಕ್ಷ ರೂ.ಗಳಿಗೆ ಖರೀದಿಸಿತು. ಈ ವರ್ಷದ ಋತುವಿನ ಹರಾಜಿನಲ್ಲಿ ಪಡಿಕ್ಕಲ್ ಅತ್ಯಂತ ದುಬಾರಿ ಆಟಗಾರರಾದರು.

ಅದೇ ರೀತಿ, ಹುಬ್ಬಳ್ಳಿ ಟೈಗರ್ಸ್ ಕೂಡ ಅಭಿನವ್ ಮನೋಹರ್ ಅವರನ್ನು 12.20 ಲಕ್ಷ ರೂ.ಗಳಿಗೆ ಖರೀದಿಸಿತು. ಹುಬ್ಬಳ್ಳಿ ಫ್ರಾಂಚೈಸಿ ಅವರಿಬ್ಬರಿಗೂ ಅರ್ಧದಷ್ಟು ಹಣವನ್ನು ಖರ್ಚು ಮಾಡಿತು. ಟೀಮ್ ಇಂಡಿಯಾ ಅನುಭವಿ ಮತ್ತು ಕೆಕೆಆರ್ ಆಟಗಾರ ಮನೀಶ್ ಪಾಂಡೆ ಅವರನ್ನು ಮೈಸೂರು ವಾರಿಯರ್ಸ್ 12.20 ಲಕ್ಷ ರೂ.ಗಳಿಗೆ ಖರೀದಿಸಿತು.

ದ್ರಾವಿಡ್​ ಪುತ್ರನಿಗೆ ಶಾಕ್

ಇದೇ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಮಹಾರಾಜ ಟಿ20 ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರಿಸಲಿಲ್ಲ. ಸಮಿತ್​ ಅವರು ಕನಿಷ್ಠ 50 ಸಾವಿರ ರೂ.ಗೆ ಹರಾಜಿಗೆ ಬಂದಿದ್ದರು. ಸಮಿತ್ ದ್ರಾವಿಡ್ ಕಳೆದ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಭಾಗವಾಗಿದ್ದರು. ಆದರೆ, ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ಕಳೆದ ಋತುವಿನಲ್ಲಿ ಏಳು ಪಂದ್ಯಗಳನ್ನು ಆಡಿದ್ದ ಸಮಿತ್, 11.71 ರ ಸರಾಸರಿಯಲ್ಲಿ 82 ರನ್ ಗಳಿಸಿದರು.

ಈ ಮೆಗಾ ಟೂರ್ನಮೆಂಟ್ ಆಗಸ್ಟ್ 11 ರಿಂದ 27 ರವರೆಗೆ ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದಾಗ್ಯೂ, ಹಿಂದಿನದಕ್ಕಿಂತ ಭಿನ್ನವಾಗಿ, ಈ ಬಾರಿ ಈ ಟೂರ್ನಮೆಂಟ್ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿಯ ಐಪಿಎಲ್ ಟ್ರೋಫಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ ಮತ್ತು ಮಾಯಾಂಕ್ ಅಗರ್ವಾಲ್ ಅವರಂತಹ ಸ್ಟಾರ್ ಆಟಗಾರರು ಸಹ ಈ ಟೂರ್ನಿಯಲ್ಲಿ ಆಡಲಿದ್ದಾರೆ. (ಏಜೆನ್ಸೀಸ್​)