ಕ್ರೀಡೆ

ಐಸಿಸಿ ಅಂಪೈರ್​ ಪ್ಯಾನೆಲ್​ಗೆ ಆಯ್ಕೆಯಾದ ಪಾಕ್​ನ ಮೊದಲ ಮಹಿಳೆ ಈಕೆ! ಯಾರು ಗೊತ್ತೇ ಇವರು?

ಲಾಹೋರ್​: ಐಸಿಸಿ ಅಂತಾರಾಷ್ಟ್ರೀಯ ಅಭಿವೃದ್ಧಿ ಅಂಪೈರ್‌ಗಳ ಸಮಿತಿಗೆ ನಾಮನಿರ್ದೇಶನಗೊಂಡ ಮೊದಲ ಪಾಕಿಸ್ತಾನಿ ಮಹಿಳೆಯಾಗಿ ಇದೀಗ ಸಲೀಮಾ ಇಮ್ತಿಯಾಜ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಸಲೀಮಾ​ಗೆ ವಿಶೇಷ ಅಭಿನಂದನೆ ತಿಳಿಸಿದೆ.

ಇನ್ನು ಐಸಿಸಿ ಅಂತಾರಾಷ್ಟ್ರೀಯ ಅಭಿವೃದ್ಧಿ ಅಂಪೈರ್‌ಗಳ ಸಮಿತಿಗೆ ಆಯ್ಕೆಯಾದ ಬೆನ್ನಲ್ಲೇ ಸಂತಸ ವ್ಯಕ್ತಪಡಿಸಿದ ಇಮ್ತಿಯಾಜ್​, "ಇದು ಕೇವಲ ನನ್ನ ಗೆಲುವಲ್ಲ, ಇದು ಪಾಕಿಸ್ತಾನದ ಪ್ರತಿಯೊಬ್ಬ ಮಹಿಳಾ ಕ್ರಿಕೆಟರ್​ ಮತ್ತು ಅಂಪೈರ್‌ಗೆ ಒಲಿದ ಜಯವಾಗಿದೆ. ನನ್ನ ಯಶಸ್ಸು ಕ್ರೀಡೆಯಲ್ಲಿ ತಮ್ಮದೇ ಛಾಪು ಮೂಡಿಸುವ ಕನಸು ಕಾಣ್ತಿರುವ ಅದೆಷ್ಟೋ ಸಂಖ್ಯೆಯ ಮಹಿಳೆಯರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತೇನೆ. ನನ್ನ ಮಗಳು 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಅಂಪೈರಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಮಾಡಬೇಕೆಂಬುದೇ ದೊಡ್ಡ ಆಸೆ" ಎಂದು ಹೇಳಿದರು.

ಸಲೀಮಾ ಇಮ್ತಿಯಾಜ್ ಅವರ ಪುತ್ರಿ ಕೈನಾತ್ ಕೂಡ ಒಬ್ಬ ಸ್ಟಾರ್​ ಆಟಗಾರ್ತಿ. ಪಾಕಿಸ್ತಾನ ತಂಡದ ಪರ ಆಡಿರುವ ಅವರು, ಇಲ್ಲಿಯವರೆಗೆ ಒಟ್ಟು 40 ಅಂತಾರಾಷ್ಟ್ರೀಯ ಪಂದ್ಯಗಳು, 19 ಏಕದಿನ ಮತ್ತು 21 ಟಿ-20 ಮ್ಯಾಚ್​ಗಳನ್ನು ಆಡಿದ್ದಾರೆ." ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಮಹತ್ವದ ಕನಸಾಗಿತ್ತು. ಅದು ಈಗ ಈಡೇರಿದೆ. ನಾನು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನೊಂದಿಗೆ ಸಾಕಷ್ಟು ಅವಕಾಶಗಳನ್ನು ಹೊಂದಿದ್ದೇನೆ. ಆದರೆ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡುವುದೇ ನನ್ನ ಅಂತಿಮ ಗುರಿ" ಎಂದು ಇಮ್ತಿಯಾಜ್ ಹೇಳಿದ್ದಾರೆ,(ಏಜೆನ್ಸೀಸ್).