ಕ್ರೀಡೆ

ಅರ್ಜುನ ಪ್ರಶಸ್ತಿ ಪಡೆಯಲು ಯಾವ ಪದಕ ಗೆಲ್ಲಬೇಕು, ಪ್ರಧಾನಿಗೆ ಸಾಕ್ಷಿ ಮಲಿಕ್ ಪ್ರಶ್ನೆ

ನವದೆಹಲಿ: ಈಗಾಗಲೆ ದೇಶದ ಅತ್ಯನ್ನತ ಖೇಲ್‌ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಈ ಬಾರಿ ಅರ್ಜುನ ಪ್ರಶಸ್ತಿ ರೇಸ್‌ನಲ್ಲಿದ್ದರೂ, ಕೊನೇಕ್ಷಣದಲ್ಲಿ ಅವರನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ಸಾಕ್ಷಿ ಮಲಿಕ್, ‘ಅರ್ಜುನ ಪ್ರಶಸ್ತಿಯನ್ನು ಪಡೆಯಲು ನಾನು ಯಾವ ಪದಕವನ್ನು ಗೆದ್ದು ತರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಸಮಿತಿ ಒಟ್ಟು 29 ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ಆದರೆ ಈಗಾಗಲೆ ಖೇಲ್‌ರತ್ನ ಪ್ರಶಸ್ತಿ ಪಡೆದುಕೊಂಡಿರುವ ಸಾಕ್ಷಿ ಮಲಿಕ್ ಮತ್ತು ವೇಟ್‌ಲ್ಟಿರ್ ಮೀರಾಬಾಯಿ ಚಾನು ಅವರ ಹೆಸರನ್ನು ಕ್ರೀಡಾ ಸಚಿವಾಲಯ ಕೈಬಿಟ್ಟಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಾಧನೆಗಾಗಿ ಸಾಕ್ಷಿ ಮಲಿಕ್ ನೇರವಾಗಿ ಖೇಲ್‌ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಅರ್ಜುನ ಪ್ರಶಸ್ತಿ ಪಟ್ಟಿಯಿಂದ ತಮ್ಮನ್ನು ಕೈಬಿಟ್ಟ ಬಗ್ಗೆ ಕ್ರೀಡಾ ಸಚಿವಾಲಯ ನೀಡಿರುವ ಉತ್ತರದಿಂದ ಸಮಾಧಾನಗೊಳ್ಳದ 27 ವರ್ಷದ ಸಾಕ್ಷಿ ಮಲಿಕ್, ಪ್ರಧಾನಿ ಮೋದಿ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಇಬ್ಬರಿಗೂ ಪತ್ರ ಬರೆದಿದ್ದಾರೆ.

‘ಖೇಲ್‌ರತ್ನ ಪ್ರಶಸ್ತಿ ಪಡೆದಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರತಿ ಕ್ರೀಡಾಪಟು ಕೂಡ ಎಲ್ಲ ಪ್ರಶಸ್ತಿಗಳನ್ನು ಗೆಲ್ಲಲು ಇಷ್ಟಪಡುತ್ತಾರೆ. ಕ್ರೀಡಾಪಟುಗಳು ಇದಕ್ಕಾಗಿ ಜೀವವನ್ನೇ ಪಣಕ್ಕಿಡುತ್ತಾರೆ. ನಾನು ಕೂಡ ಅರ್ಜುನ ಪ್ರಶಸ್ತಿ ಪುರಸ್ಕೃತೆ ಎಂದು ಗುರುತಿಸಿಕೊಳ್ಳುವ ಕನಸು ಕಂಡಿದ್ದೇನೆ. ಅರ್ಜುನ ಪ್ರಶಸ್ತಿ ಸ್ವೀಕರಿಸಲು ನಾನು ಇನ್ನು ಯಾವ ಪದಕವನ್ನು ಗೆದ್ದುತರಬೇಕಾಗಿದೆ ಅಥವಾ ನನಗೆ ಈ ಕುಸ್ತಿ ವೃತ್ತಿಜೀವನದಲ್ಲಿ ಎಂದೂ ಈ ಪ್ರಶಸ್ತಿ ಪಡೆಯುವ ಅದೃಷ್ಟ ಇಲ್ಲವೇ’ ಎಂದು ಸಾಕ್ಷಿ ಮಲಿಕ್ ಬರೆದಿದ್ದಾರೆ. ಸಾಕ್ಷಿ ಈಗಾಗಲೆ ಪದ್ಮಶ್ರೀ ಪ್ರಶಸ್ತಿ ಗೌರವವನ್ನೂ ಪಡೆದುಕೊಂಡಿದ್ದಾರೆ.

ರೋಹ್ಟಕ್‌ನ ಕುಸ್ತಿಪಟು ಸಾಕ್ಷಿ ಒಲಿಂಪಿಕ್ಸ್ ಪದಕವಲ್ಲದೆ 2017ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಅದೇ ವರ್ಷ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ರಜತ ಜಯಿಸಿದ್ದರು. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2014ರಲ್ಲಿ ಬೆಳ್ಳಿ ಮತ್ತು 2018ರಲ್ಲಿ ಕಂಚಿನ ಪದಕ ಜಯಿಸಿದ್ದರು.