ಕ್ರೀಡೆ

ರಣಜಿ ಟ್ರೋಫಿಯಲ್ಲಿ ರೈಲ್ವೇಸ್​ ಎದುರು ಮುನ್ನಡೆ ಕಂಡರೂ ಕರ್ನಾಟಕಕ್ಕೆ 2ನೇ ಇನಿಂಗ್ಸೇ ನಿರ್ಣಾಯಕ!

ಸೂರತ್​: ಬಾಲಂಗೋಚಿಗಳ ಹೋರಾಟದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆತಿಥೇಯ ರೈಲ್ವೇಸ್​ ಎದುರು ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದರೂ, ಮೊಹಮದ್​ ಸೈಫ್​ (51*) ಪ್ರತಿಹೋರಾಟದಿಂದ ಸವಾಲಿನ ಗುರಿ ಎದುರಾಗುವ ಭೀತಿಯಲ್ಲಿದೆ. ಹೀಗಾಗಿ ರಾಜ್ಯದ ಪಾಲಿಗೆ 2ನೇ ಇನಿಂಗ್ಸ್​ನಲ್ಲಿ ತೋರುವ ಬ್ಯಾಟಿಂಗ್​ ನಿರ್ವಹಣೆಯೇ ನಿರ್ಣಾಯಕ ಎನಿಸಿದೆ.

ಲಾಲ್​ಬಾಯಿ ಕಂಟ್ರಾಕ್ಟರ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 6 ವಿಕೆಟ್​ಗೆ 90 ರನ್​ಗಳಿಂದ 2ನೇ ದಿನದಾಟ ಮುಂದುವರಿಸಿದ ಕರ್ನಾಟಕ ತಂಡ ವಿಕೆಟ್​ ಕೀಪರ್​-ಬ್ಯಾಟರ್​ ಶರತ್​ ಶ್ರೀನಿವಾಸ್​ (24) ಮತ್ತು ವೈಶಾಕ್​ ವಿಜಯ್​ಕುಮಾರ್​ (24) ಉಪಯುಕ್ತ ಕೊಡುಗೆಯಿಂದ 174 ರನ್​ ಪೇರಿಸಿತು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 19 ರನ್​ಗಳ ಮುನ್ನಡೆ ಸಾಧಿಸುವಲ್ಲಿ ಕರ್ನಾಟಕ ಯಶಸ್ವಿಯಾಯಿತು. ಆದರೆ ರೈಲ್ವೇಸ್​ ತಂಡದ 2ನೇ ಇನಿಂಗ್ಸ್​ನಲ್ಲಿ ಫೀಲ್ಡಿಂಗ್​ ವಿಭಾಗದಲ್ಲಿ ತೋರಿದ ಕೆಟ್ಟ ನಿರ್ವಹಣೆಯಿಂದ ರಾಜ್ಯ ತಂಡ ಸುಮಾರು 4 ಕ್ಯಾಚ್​ಗಳನ್ನು ಕೈಚೆಲ್ಲಿತು. ಇದರಿಂದಾಗಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾದ ರೈಲ್ವೇಸ್​ ತಂಡ ದಿನದಂತ್ಯಕ್ಕೆ 8 ವಿಕೆಟ್​ಗೆ 209 ರನ್​ ಪೇರಿಸಿದೆ. ಅರ್ಧಶತಕ ಬಾರಿಸಿರುವ ಸೈಫ್​ ಜತೆಗೆ ಅಯನ್​ ಚೌಧರಿ (1*) ಕ್ರೀಸ್​ನಲ್ಲಿದ್ದಾರೆ. ರೈಲ್ವೇಸ್​ ಸದ್ಯ 190 ರನ್​ ಮುನ್ನಡೆಯಲ್ಲಿದೆ. 3ನೇ ದಿನ ರೈಲ್ವೇಸ್​ ಮುನ್ನಡೆ 200ರ ಗಡಿ ದಾಟದಂತೆ ತಡೆದರೂ, ಈ ಲೋ-ಸ್ಕೋರಿಂಗ್​ ಪಂದ್ಯದಲ್ಲಿ ರಾಜ್ಯ ತಂಡ ಈ ಸವಾಲನ್ನು ಬೆನ್ನಟ್ಟುವುದು ಕಠಿಣವಾಗಿಯೇ ಕಾಣಿಸುತ್ತಿದೆ.

ಬೌಲರ್ಸ್​ಗೆ ಸಾಥ್​ ನೀಡದ ಫೀಲ್ಡರ್ಸ್​

ರಾಜ್ಯ ತಂಡದ ಬೌಲರ್​ಗಳು ರೈಲ್ವೇಸ್​ 2ನೇ ಇನಿಂಗ್ಸ್​ಗೂ ಬೇಗನೆ ಕಡಿವಾಣ ಹಾಕಲು ಯತ್ನಿಸಿದರು. ವೇಗಿಗಳಾದ ವೈಶಾಕ್​ ವಿಜಯ್​ಕುಮಾರ್​ 3 ಮತ್ತು ವಿದ್ವತ್​ ಕಾವೇರಪ್ಪ 2 ವಿಕೆಟ್​ ಕಬಳಿಸಿದರು. ಆದರೆ ಫೀಲ್ಡರ್​ಗಳು ಬೌಲರ್​ಗಳಿಗೆ ಸಮರ್ಥ ಸಾಥ್​ ನೀಡದೆ ಕ್ಯಾಚ್​ ಕೈಚೆಲ್ಲಿ ರಾಜ್ಯ ತಂಡಕ್ಕೆ ಹಿನ್ನಡೆ ತಂದರು. ಜೀವದಾನಗಳ ಲಾಭ ಪಡೆದ ಸೈಫ್​ ಅರ್ಧಶತಕ ಬಾರಿಸಿದರೆ, ವಿಕೆಟ್​ ಕೀಪರ್-ಬ್ಯಾಟರ್​ ಸೂರಜ್​ ಅಹುಜಾ ಕೂಡ ರೈಲ್ವೇಸ್​ ಮೊತ್ತ ಏರಿಸಿದರು.

ರೈಲ್ವೇಸ್​: 155 ಮತ್ತು 62 ಓವರ್​ಗಳಲ್ಲಿ 8 ವಿಕೆಟ್​ಗೆ 209 (ವಿವೇಕ್​ ಸಿಂಗ್​ 13, ಪ್ರಥಮ್​ 33, ಸೈಫ್​ 51*, ಅಹುಜಾ 48, ಯುವರಾಜ್​ 13, ವೈಶಾಕ್​ 45ಕ್ಕೆ 3, ವಿದ್ವತ್​ 35ಕ್ಕೆ 2, ಕೌಶಿಕ್​ 31ಕ್ಕೆ 1, ಸಮರ್ಥ್​ 32ಕ್ಕೆ 1, ಹಾರ್ದಿಕ್​ 53ಕ್ಕೆ 1), ಕರ್ನಾಟಕ: 50.5 ಓವರ್​ಗಳಲ್ಲಿ 174 (ಕಿಶನ್​ 17, ಶರತ್​ 24, ವೈಶಾಕ್​ 24, ಆಕಾಶ್​ ಪಾಂಡೆ 63ಕ್ಕೆ 5, ಅಯನ್​ 39ಕ್ಕೆ 4).