ಕ್ರೀಡೆ

ಭಾರತೀಯ ಈಜುಪಟುಗಳಿಗೆ ದುಬೈನಲ್ಲಿ 2 ತಿಂಗಳು ತರಬೇತಿ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಕನಸಿನಲ್ಲಿರುವ ಭಾರತೀಯ ಈಜುಪಟುಗಳಾದ ವೀರ್‌ಧವಳ್ ಖಾಡೆ, ಶ್ರೀಹರಿ ನಟರಾಜ್ ಹಾಗೂ ಕುಶಾಗ್ರ ರಾವತ್ ತಿಂಗಳಾಂತ್ಯದಲ್ಲಿ ದುಬೈನಲ್ಲಿ ಅಭ್ಯಾಸ ಕೈಗೊಳ್ಳಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ. ಕೋವಿಡ್-19 ರಿಂದಾಗಿ ಕಳೆದ 5 ತಿಂಗಳಿಂದ ಈಜು ಪಟುಗಳು ಅಭ್ಯಾಸ, ತರಬೇತಿಯಿಂದ ಹೊರಗುಳಿದಿದ್ದರು. ಭಾರತದ ಮೂವರು ಈಜುಪಟುಗಳು ದುಬೈನ ಅಕ್ವಾ ನೇಷನ್ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ಕೋಚ್ ಎ.ಸಿ.ಜಯರಾಜನ್ ಮಾರ್ಗದರ್ಶನದಲ್ಲಿ 2 ತಿಂಗಳ ಕಾಲ ತರಬೇತಿ ಪಡೆಯಲಿದ್ದಾರೆ. ತರಬೇತಿಗೆ 35 ಲಕ್ಷ ರೂಪಾಯಿ ವೆಚ್ಚಮಾಡಲಾಗುತ್ತಿದೆ ಎಂದು ಸಾಯ್ ಮೂಲಗಳು ತಿಳಿಸಿವೆ. ಭಾರತೀಯ ಈಜು ಫೆಡರೇಷನ್ (ಎಸ್‌ಎಫ್ ಐ)  ಮೂವರ ವೀಸಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಇದೇ ತಿಂಗಳ ಅಂತ್ಯದಲ್ಲಿ ದುಬೈಗೆ ಕಳುಹಿಸುವ ಯೋಚನೆಯಲ್ಲಿದೆ.

‘ವೀಸಾ ಕುರಿತಂತೆ ಪ್ರಕ್ರಿಯೆ ಆರಂಭಿಸಿದ್ದು, ಅದಷ್ಟು ಬೇಗ ವೀಸಾ ದಕ್ಕುವ ವಿಶ್ವಾಸವಿದೆ. ಬಳಿಕ ವಿಮಾನ ಟಿಕೆಟ್ ಕಾಯ್ದಿರಿಸಲಾಗುವುದು’ ಎಂದು ಎಸ್‌ಎ್ಐ ಪ್ರಧಾನ ಕಾರ್ಯದರ್ಶಿ ಮೊನಾಲ್ ಚೋಕ್ಷಿ ತಿಳಿಸಿದ್ದಾರೆ. ಆಗಸ್ಟ್ 20ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದ್ದು, ಇಲ್ಲವಾದರೆ ಆ.24-25ರೊಳಗೆ ಮೂವರನ್ನು ದುಬೈಗೆ ಕಳುಹಿಸಿಕೊಡಲಾವುದು’ ಎಂದರು. ಬೆಂಗಳೂರು ಮೂಲದ ಈಜುಪಟು ಶ್ರೀಹರಿ ಅವರ ಕೋಚ್ ಜಯರಾಜನ್ ಕೂಡ ಈಜುಪಟುಗಳೊಂದಿಗೆ ತೆರಳುತ್ತಿದ್ದು, ಮಾಜಿ ಕೋಚ್ ಪ್ರದೀಪ್ ಕುಮಾರ್ ಈಗಾಗಲೇ ಅದೇ ಅಕಾಡೆಮಿಯಲ್ಲಿದ್ದಾರೆ ಎಂದು ಚೋಕ್ಷಿ ತಿಳಿಸಿದ್ದಾರೆ.

ವೀರ್ ಧವಳ್ ಖಾಡೆ (50ಮೀಟರ್ ಫ್ರೀಸ್ಟೈಲ್), ಶ್ರೀಹರಿ ನಟರಾಜ್ (100 ಮೀಟರ್ ಬ್ಯಾಕ್‌ಸ್ಟ್ರೋಕ್) ಹಾಗೂ ಕುಶಾಗ್ರ ರಾವತ್, 400ಮೀ, 800ಮೀ ಹಾಗೂ 1500ಮೀಟರ್ ಫ್ರೀ ಸ್ಟೈಲ್‌ನಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಬಿ ಹಂತದಲ್ಲಿ ಅರ್ಹತೆ ಪಡೆಯುವ ಅವಕಾಶ ಹೊಂದಿದ್ದಾರೆ.

ಲಾಕ್‌ಡೌನ್ ೋಷಣೆಯಾದ ಮಾರ್ಚ್ 25 ರಿಂದ ಈಜುಕೊಳಗಳು ಕೂಡ ಬಂದ್ ಆಗಿದ್ದವು. ಹಂತ ಹಂತವಾಗಿ ಅನ್‌ಲಾಕ್ ೋಷಣೆಯಾಗಿದ್ದರೂ ಆಗಸ್ಟ್ 31ರವರೆಗೂ ಈಜುಕೊಳಗಳಿಗೆ ನಿರ್ಬಂಧ ಮುಂದುವರಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಈಜುಕೊಳಗಳು ಅಭ್ಯಾಸಕ್ಕೆ ಯೋಗ್ಯವಲ್ಲದ ಕಾರಣ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ಹೊಂದಿರುವ ಈಜುಪಟುಗಳಿಗೆ ದುಬೈನಲ್ಲಿ ತರಬೇತಿ ಆರಂಭಿಸಲು ಸಾಯ್ ನಿರ್ಧರಿಸಿದೆ ಎನ್ನಲಾಗಿದೆ.

‘ತರಬೇತಿ ಆರಂಭಿಸಲು ಉತ್ಸುಕನಾಗಿದ್ದೇನೆ. ನಮಗೆ ಅಭ್ಯಾಸಕ್ಕೆ ಅನುವು ಮಾಡಿಕೊಡುತ್ತಿರುವ ಎಸ್‌ಎ್ಐ ಹಾಗೂ ಸಾಯ್‌ಗೆ ಧನ್ಯವಾದಗಳು. ನಾವಲ್ಲದೆ, ಬೇರೆ ಈಜುಪಟುಗಳು ಅದಷ್ಟು ಬೇಗ ತರಬೇತಿ ಆರಂಭಿಸುವಂತಾಗಲಿ’ ಶ್ರೀಹರಿ ನಟರಾಜ್, ಈಜುಪಟು