ನವದೆಹಲಿ: ತೆರಿಗೆ ಉಳಿಸಲು ವಿದೇಶಗಳಲ್ಲಿ ಹಣ ಹೂಡಿರುವ ಜಗತ್ತಿನ ವಿವಿಧ ದೇಶಗಳ ಗಣ್ಯರ ವಿವರವನ್ನು ಹೊರಗೆಳೆದಿದೆ ಎನ್ನಲಾದ ಪ್ಯಾಂಡೋರಾ ಪೇಪರ್ಸ್ ಲೀಕ್ ವರದಿಯಲ್ಲಿ ಭಾರತದ ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ ಹೆಸರೂ ಸೇರಿದೆ ಎನ್ನಲಾಗಿದೆ. ಸಚಿನ್, ಅವರ ಪತ್ನಿ ಅಂಜಲಿ ತೆಂಡುಲ್ಕರ್ ಮತ್ತು ಮಾವ ಆನಂದ್ ಮೆಹ್ತ ಬ್ರಿಟೀಷ್ ವರ್ಜಿನ್ ಐಲೆಂಡ್ಸ್ನ ಸಾಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಎಂಬ ಕಂಪೆನಿಯ ಲಾಭದಾಯಕ ಮಾಲೀಕರಾಗಿದ್ದರು ಎನ್ನಲಾಗಿದೆ.
91 ದೇಶಗಳ ಅತ್ಯಂತ ಶ್ರೀಮಂತರಾಗಿರುವ ಜಗತ್ತಿನ ಹಾಲಿ ಮತ್ತು ಮಾಜಿ ನಾಯಕರು, ರಾಜಕಾರಣಿಗಳು ಮತ್ತು ಅಧಿಕಾರಿಗಳು, ತೆರಿಗೆ ವಿನಾಯಿತಿ ಇರುವ ದೇಶಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಸಂಬಂಧವಾದ 956 ಕಂಪೆನಿಗಳ 11.9 ಮಿಲಿಯನ್ ರಹಸ್ಯ ದಾಖಲಾತಿಗಳು ತಮ್ಮ ಕೈಸೇರಿವೆ ಎಂದು ಪನಾಮಾ ಪೇಪರ್ಸ್ ತನಿಖಾ ವರದಿ ನೀಡಿರುವ 'ಇಂಟರ್ನ್ಯಾಷನಲ್ ಕಂಸೋರ್ಟಿಯಂ ಆಫ್ ಇನ್ವೆಸ್ಟಿಗೇಟೀವ್ ಜರ್ನಲಿಸ್ಟ್ಸ್' ಹೇಳಿಕೆ ನೀಡಿದೆ.
ತೆಂಡುಲ್ಕರ್ ಅವರು ರಾಜ್ಯಸಭಾ ಸದಸ್ಯರಾಗಿದ್ದ 2012 ರಿಂದ 2018 ರವರೆಗಿನ ಅವಧಿಯ ನಾಲ್ಕು ವರ್ಷಗಳಲ್ಲಿ ಸಾಸ್ ಕಂಪೆನಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಕೋಟ್ಯಂತರ ರೂಪಾಯಿಗಳ ಶೇರ್ಗಳನ್ನು ಅವರು ಹೊಂದಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ತೆಂಡುಲ್ಕರ್ ವಕ್ತಾರರು, ಈ ಹೂಡಿಕೆಯು ಕಾನೂನುಬದ್ಧವಾಗಿತ್ತು ಮತ್ತು ತೆರಿಗೆ ಇಲಾಖೆಗೆ ಘೋಷಿಸಲ್ಪಟ್ಟಿತ್ತು ಎಂದು ಹೇಳಿದ್ದಾರೆ ಎಂದೂ ವರದಿ ಹೇಳಿದೆ. (ಏಜೆನ್ಸೀಸ್)