ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ದಾಖಲೆಗಳನ್ನೆಲ್ಲ ಮುರಿದ ಬಳಿಕ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ವೇಳೆ ಅವರು ಮತ್ತೆ ಬಾಲ್ಯದ ದಿನಗಳನ್ನೂ ನೆನಪಿಸಿಕೊಳ್ಳುತ್ತಿದ್ದಾರೆ. ಈಗ ಲಾಕ್ಡೌನ್ನಿಂದಾಗಿ ಮುಂಬೈನ ಮನೆಯಲ್ಲೇ ಕುಟುಂಬದೊಂದಿಗೆ ಬಂಧಿಯಾಗಿರುವ ಸಚಿನ್ ತೆಂಡುಲ್ಕರ್ ಮಳೆಯಲ್ಲಿ ನೆನೆದು ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಮುಂಬೈನಲ್ಲಿ ಬುಧವಾರ ಮಳೆ ಸುರಿದ ವೇಳೆ 47 ವರ್ಷದ ಸಚಿನ್ ತೆಂಡುಲ್ಕರ್ ಮನೆಯಿಂದ ಹೊರಬಂದು ಮಳೆಯಲ್ಲಿ ನೆನೆಯುತ್ತ ಆನಂದಿಸುತ್ತಿರುವ ದೃಶ್ಯವನ್ನು ಅವರ ಪುತ್ರಿ ಸಾರಾ ತೆಂಡುಲ್ಕರ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಚಿನ್ ತೆಂಡುಲ್ಕರ್, 'ನನ್ನ ನೆಚ್ಚಿನ ಕ್ಯಾಮರಾವುಮನ್ ಸಾರಾ ತೆಂಡುಲ್ಕರ್ ನಾನು ಜೀವನದ ಸರಳವಾದ ಆನಂದನ್ನು ಆನಂದಿಸುತ್ತಿರುವುದನ್ನು ಸೆರೆ ಹಿಡಿದಿದ್ದಾಳೆ. ಮಳೆ ಹನಿಗಳು ನನಗೆ ಯಾವಾಗಲೂ ಬಾಲ್ಯದ ದಿನಗಳನ್ನು ನೆನಪಿಸುತ್ತವೆ, ಮುಂಬೈ ರೈನ್ಸ್' ಎಂದು ಬರೆದುಕೊಂಡಿದ್ದಾರೆ. ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಇದಕ್ಕೆ ಪ್ರತಿಕ್ರಿಯಿಸಿ, ಮಾಸ್ಟರ್ ಎಂದು ಕಮೆಂಟ್ ಹಾಕಿದ್ದಾರೆ. ಸಚಿನ್ ಅಭಿಮಾನಿಗಳು ಕೂಡ ಅವರೊಳಗಿನ ಮಗುವನ್ನು ಮತ್ತು ಅವರ ಸರಳತೆಯನ್ನು ಮೆಚ್ಚಿದ್ದಾರೆ.
ಇದನ್ನೂ ಓದಿ: VIDEO | ಮಗನಿಗೆ ಕುದುರೆ ಸವಾರಿ ಕಲಿಸಿದ ಶಿಖರ್ ಧವನ್!
ಸಚಿನ್ ತೆಂಡುಲ್ಕರ್ ಮಳೆಯಲ್ಲಿ ಆನಂದಿಸುತ್ತಿವುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಸಮಯದಲ್ಲಿ ಅವರ ಮಗಳು ಸಾರಾ ತೆಂಡುಲ್ಕರ್, 'ಅವರೊಳಗಿನ ಮಗು ಇನ್ನೂ ಜೀವಂತವಾಗಿದೆ. ಮುಂಬೈ ಮಳೆಯನ್ನು ಆನಂದಿಸುತ್ತಿದ್ದಾರೆ' ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಸಿದೆ. ಲಾಕ್ಡೌನ್ ಸಮಯವನ್ನು ಮನೆಯಲ್ಲೇ ಆನಂದಿಸುತ್ತಿರುವ ಸಚಿನ್ ತೆಂಡುಲ್ಕರ್ ಈ ಹಿಂದೆ ಪುತ್ರ ಅರ್ಜುನ್ಗೆ ತಾವೇ ಹೇರ್ಕಟ್ ಮಾಡಿದ್ದರು. ಅಂತಾರಾಷ್ಟ್ರೀಯ ಯೋಗದಿನದಂದು ಅವರು ಮಗಳು ಸಾರಾ ಮತ್ತು ಮಗ ಅರ್ಜುನ್ ಜತೆಗೆ ಮನೆಯಲ್ಲೇ ಯೋಗ ಕೂಡ ಮಾಡಿದ್ದರು.