ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಉದ್ಯಮಿಯಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. "ಟೆನ್ ಎಕ್ಸ್ ಯು' ಎಂಬ ಹೆಸರಿನ ಕ್ರೀಡಾ ಉಡುಪು ಮತ್ತು ಶೂಗಳ ಹೊಸ ಬ್ರ್ಯಾಂಡ್ಅನ್ನು ಸಚಿನ್ ಪರಿಚಯಿಸಿದ್ದಾರೆ.
ತಮ್ಮ ಹೊಸ ಬ್ರ್ಯಾಂಡ್ನ ಮೊದಲ ಶೋ ರೂಮ್ಗೆ ಸಚಿನ್ ಪತ್ನಿ ಅಂಜಲಿ ಮತ್ತು ಪುತ್ರಿ ಸಾರಾ ತೆಂಡುಲ್ಕರ್ ಜತೆಗೂಡಿ ಬಾಂದ್ರಾದಲ್ಲಿ ಶುಕ್ರವಾರ ಚಾಲನೆ ನೀಡಿದರು. ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಹಾಜರಿದ್ದರು. ಪ್ರಮುಖವಾಗಿ ಶೂಗಳತ್ತ ಈ ಹೊಸ ಬ್ರ್ಯಾಂಡ್ ಗಮನಹರಿಸಿದೆ. ಕ್ರೀಡಾಪಟುಗಳ ವೃತ್ತೀಜಿವನದಲ್ಲಿ ಕಾಲಿನ ಗಾಯದ ಸಮಸ್ಯೆಗಳಿಂದ ಪಾರಾಗಲು ಸರಿಯಾದ ಶೂಗಳ ಬಳಕೆಯೂ ಅಗತ್ಯ ಎಂಬ ಸಚಿನ್ ಅವರ ಕಾಳಜಿ ಇದಕ್ಕೆ ಕಾರಣವಾಗಿದೆ.
"ನನ್ನ ವೃತ್ತೀಜಿವನದ ಅನುಭವವನ್ನು ಆಧರಿಸಿ ಈ ಉಡುಪು ಮತ್ತು ಶೂಗಳನ್ನು ಸಿದ್ಧಪಡಿಸುತ್ತಿದ್ದೇವೆ. ಒಂದು ಜೊತೆ ಶೂಗಳನ್ನು ಸಿದ್ಧಪಡಿಸಲು 18 ತಿಂಗಳು ಬೇಕಾಗುತ್ತದೆ. ಪ್ರಮುಖವಾಗಿ ಕ್ರಿಕೆಟ್ ಶೂಗಳಿಗೆ ಆದ್ಯತೆ ನೀಡಿದ್ದೇವೆ. ಜತೆಗೆ ಜನಸಾಮಾನ್ಯರು ಧರಿಸುವ ಶೂಗಳೂ ಲಭ್ಯವಿರುತ್ತವೆ. ಕ್ರೀಡಾಪಟುಗಳು ಮಾತ್ರವಲ್ಲ ಎಲ್ಲರೂ ಈ ಶೂಗಳನ್ನು ಬಳಸಬಹುದು' ಎಂದು 100 ಅಂತಾರಾಷ್ಟ್ರೀಯ ಕ್ರಿಕೆಟ್ಗಳ ಶತಕಗಳ ಸರದಾರ ಸಚಿನ್ ತಿಳಿಸಿದರು.