ಕ್ರೀಡೆ

ನನ್ನ ಮೊದಲ ಕಾರು ಹುಡುಕಲು ನೆರವಾಗಿ, ಅಭಿಮಾನಿಗಳಿಗೆ ಸಚಿನ್​ ತೆಂಡುಲ್ಕರ್​ ಮೊರೆ!

ಮುಂಬೈ: ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್​ ತೆಂಡುಲ್ಕರ್​ 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನದಲ್ಲಿ ಹಲವಾರು ದಾಖಲೆಗಳ ಒಡೆಯರಾದವರು. ಇದರ ಜತೆಜತೆಯಲ್ಲೇ ಕೋಟ್ಯಂತರ ರೂಪಾಯಿ ಸಂಪಾದಿಸಿರುವ ಅವರು, ಹಲವಾರು ಐಷಾರಾಮಿ ಕಾರುಗಳ ಒಡೆಯರೂ ಆಗಿದ್ದಾರೆ. ಆದರೆ ಅವರಿಗೆ ಈಗಲೂ ಅವರ ಮೊದಲ ಕಾರು 'ಮಾರುತಿ 800' ಮೇಲೆ ಪ್ರೀತಿ ಇದೆ. ದುರದೃಷ್ಟವಶಾತ್​ ಆ ಕಾರು ಈಗ ಅವರ ಬಳಿ ಇಲ್ಲ. ಅದನ್ನು ಮರಳಿ ಪಡೆಯಲು ಈಗ ಅವರು ಅಭಿಮಾನಿಗಳ ಮೊರೆ ಹೋಗಿದ್ದು, ನನ್ನ ಮೊದಲ ಕಾರು ಹುಡುಕಲು ನೆರವಾಗಿ ಎಂದು ಕೇಳಿಕೊಂಡಿದ್ದಾರೆ.

'ನನ್ನ ಮೊದಲ ಕಾರು ಮಾರುತಿ 800. ಆದರೆ ದುರದೃಷ್ಟವಶಾತ್​ ಅದು ಈಗ ನನ್ನ ಬಳಿ ಇಲ್ಲ. ನಾನು ಅದನ್ನು ಈಗ ಮರಳಿ ಪಡೆದುಕೊಳ್ಳಲು ಇಷ್ಟಪಟ್ಟಿದ್ದೇನೆ. ಈಗ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿರುವ ಜನರಲ್ಲಿ ಯಾರಿಗಾದರೂ ಆ ಕಾರಿನ ಬಗ್ಗೆ ತಿಳಿದಿದ್ದರೆ ದಯವಿಟ್ಟು ನೇರವಾಗಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ' ಎಂದು ಸಚಿನ್​ ತೆಂಡುಲ್ಕರ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ಬಾಲ್ಯದಲ್ಲಿ ನಮ್ಮ ಮನೆಯ ಪಕ್ಕದ ಸಿನಿಮಾ ಮಂದಿರದಲ್ಲಿ ಸಾಕಷ್ಟು ಜಾಗವಿತ್ತು. ಜನರು ಸಿನಿಮಾ ನೋಡಲು ಹೋಗುವಅಘ ಅಲ್ಲಿ ತಮ್ಮ ಕಾರುಗಳನ್ನು ಪಾರ್ಕ್​ ಮಾಡುತ್ತಿದ್ದರು. ನಾನು ಮತ್ತು ನನ್ನ ಅಣ್ಣ ಆಗ ಬಾಲ್ಕನಿ ಮೇಲೆ ನಿಂತು ಗಂಟೆಗಳ ಕಾಲ ಆ ಕಾರುಗಳನ್ನು ವೀಕ್ಷಿಸುತ್ತಿದ್ದೆವು' ಎಂದು ಸಚಿನ್​ ಕಾರುಗಳ ಮೇಲಿನ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಭಾರತ ತಂಡದ ಪರ 200 ಟೆಸ್ಟ್​, 463 ಏಕದಿನ ಮತ್ತು ಏಕೈಕ ಟಿ20 ಪಂದ್ಯಗಳನ್ನು ಆಡಿರುವ ಸಚಿನ್​ ತೆಂಡುಲ್ಕರ್​, ಮೊದಲ ಬಾರಿ ಮುಂಬೈ ತಂಡ ಡ್ರೆಸ್ಸಿಂಗ್​ ರೂಂ ಪ್ರವೇಶಿಸಿ ಅನುಭವ ಅವಿಸ್ಮರಣೀಯ ಎಂದಿದ್ದಾರೆ. 'ನಾನು ಬಾಲ್​ ಬಾಯ್​ ಆಗಿದ್ದಾಗ ಡ್ರೆಸ್ಸಿಂಗ್​ ರೂಂನ ಬಲಭಾಗದಲ್ಲಿ ನಿಂತುಕೊಂಡಿದ್ದೆ. ಈ ಮೂಲಕ ನಾನು ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದೆ. ಆ ವೇಳೆ ನನ್ನ ಹೀರೋ ಸುನೀಲ್​ ಗಾವಸ್ಕರ್​ ಅವರು ನನಗೆ ಒಳಗೆ ಬರುವಂತೆ ಆಹ್ವಾನಿಸಿದರು. ಅವರು ಬಲಭಾಗದ ಕಾರ್ನರ್​ನ ಕೊನೆಯ ಸೀಟಿನಲ್ಲಿ ಕುಳಿತಿದ್ದರು. ಕಾಕತಾಳೀಯವೆಂದರೆ ನಾನು ಕೂಡ ನನ್ನ ಮೊದಲ ರಣಜಿ ಪಂದ್ಯ ಆಡುವ ವೇಳೆ ಅದೇ ಸೀಟಿನಲ್ಲಿ ಹೋಗಿ ಕುಳಿತುಕೊಂಡಿದ್ದೆ. ಇದೊಂದು ಅಮೋಘವಾದ ಕಾಕತಾಳೀಯವೆನಿಸಿದೆ' ಎಂದು ಸಚಿನ್​ ನೆನಪಿಸಿಕೊಂಡಿದ್ದಾರೆ.