ಕ್ರೀಡೆ

ಮಕ್ಕಳೊಂದಿಗೆ ಯೋಗ-ಅಪ್ಪನ ದಿನ ಆಚರಿಸಿದ ಸಚಿನ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಮತ್ತು ಪುತ್ರಿ ಸಾರಾ ಜತೆಗೂಡಿ ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಅಪ್ಪನ ದಿನದ ಸಂಭ್ರಮ ಆಚರಿಸಿದ್ದಾರೆ. ಮಕ್ಕಳ ಜತೆಗೂಡಿ ಯೋಗ ಮಾಡಿರುವ ಚಿತ್ರವನ್ನು ಸಚಿನ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ಯೋಗವನ್ನು ಜತೆಯಾಗಿ ಮಾಡುವ ಮೂಲಕ ಅಪ್ಪನ ದಿನವನ್ನು ಆಚರಿಸಿದೆವು’ ಎಂಬ ಅಡಿಬರಹದೊಂದಿಗೆ ಸಚಿನ್ ಚಿತ್ರವನ್ನು ಟ್ವೀಟಿಸಿದ್ದಾರೆ. ಸಚಿನ್ ಅವರ 21 ವರ್ಷದ ಪುತ್ರಿ ಸಾರಾ ಲಂಡನ್‌ನಲ್ಲಿ ವೈದ್ಯಕೀಯ ಪದವಿ ಪಡೆದಿದ್ದರೆ, 20 ವರ್ಷದ ಪುತ್ರ ಅರ್ಜುನ್ ಉದಯೋನ್ಮುಖ ಕ್ರಿಕೆಟಿಗರಾಗಿದ್ದಾರೆ.

ಇದಕ್ಕೆ ಮುನ್ನ ದಿವಂಗತ ಅಪ್ಪ ರಮೇಶ್ ತೆಂಡುಲ್ಕರ್ ಅವರ ಜತೆಗಿನ ಚಿತ್ರವನ್ನು ಟ್ವೀಟಿಸಿದ್ದ ಸಚಿನ್, ‘ಮೊದಲು ಉತ್ತಮ ವ್ಯಕ್ತಿಯಾಗಲು ಹೋರಾಡು ಎಂಬ ನಿಮ್ಮ ಅಮೂಲ್ಯ ಸಲಹೆಯನ್ನು ಯಾವಾಗಲೂ ನೆನೆಯುತ್ತಿರುತ್ತೇನೆ. ಎಲ್ಲದಕ್ಕೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು.