ನವದೆಹಲಿ: ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್ ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಯಶಸ್ವಿ ಆರಂಭಿಕ ಜೋಡಿಯಾಗಿದ್ದರು. ಹಲವಾರು ಅಮೋಘ ಜತೆಯಾಟಗಳನ್ನು ಇವರಿಬ್ಬರು ಆಡಿದ್ದಾರೆ. ಆದರೆ ಇಬ್ಬರೂ ಜತೆಯಾಗಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಾಗ ಸಚಿನ್ ತೆಂಡುಲ್ಕರ್ ಮೊದಲ ಎಸೆತವನ್ನು ಎದುರಿಸಲು ಇಷ್ಟ ಪಡುತ್ತಿರಲಿಲ್ಲವಂತೆ. ಇದಕ್ಕೆ ಕಾರಣವೇನೆಂದು ಸೌರವ್ ಗಂಗೂಲಿ ಅವರು ಈಗ ಬಹಿರಂಗಪಡಿಸಿದ್ದಾರೆ.
ಸಚಿನ್ ಜತೆಗೆ ಇನಿಂಗ್ಸ್ ಆರಂಭಿಸುತ್ತಿದ್ದಾಗ ನಾನೇ ಯಾವಾಗಲೂ ಪಂದ್ಯದ ಮೊದಲ ಎಸೆತವನ್ನು ಎದುರಿಸುತ್ತಿದ್ದೆ ಎಂದು ಸೌರವ್ ಗಂಗೂಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆಗಿನ ಆನ್ಲೈನ್ ಮಾತುಕತೆಯ ವೇಳೆ ತಿಳಿಸಿದ್ದಾರೆ. 'ಕೆಲವೊಮ್ಮೆ ನೀವು ಕೂಡ ಮೊದಲ ಎಸೆತವನ್ನು ಎದುರಿಸಿ ಎಂದು ಸಚಿನ್ಗೆ ಹೇಳುತ್ತಿದ್ದೆ. ಆದರೆ ಅವರು ಅದನ್ನು ನಿರಾಕರಿಸುತ್ತಿದ್ದರು ಮತ್ತು ನನಗೆ 2 ಕಾರಣಗಳನ್ನು ನೀಡುತ್ತಿದ್ದರು. ಮೊದಲನೆಯದಾಗಿ ಅವರ ಫಾರ್ಮ್ ಉತ್ತಮವಾಗಿದ್ದರೆ, ಅದು ಮುಂದುವರಿಯಬೇಕಾದರೆ ಅವರು ನಾನ್-ಸ್ಟ್ರೈಕರ್ನಲ್ಲಿರಬೇಕೆಂಬ ನಂಬಿಕೆ ಹೊಂದಿದ್ದರು. ಎರಡನೆಯದಾಗಿ ಅವರ ಫಾರ್ಮ್ ಕೆಟ್ಟದಾಗಿದ್ದರೆ, ಒತ್ತಡವನ್ನು ನೀಗಿಸಿಕೊಳ್ಳುವ ಸಲುವಾಗಿ ನಾನ್-ಸ್ಟ್ರೈಕರ್ನಲ್ಲಿರುವೆ ಎನ್ನುತ್ತಿದ್ದರು' ಎಂದು ಗಂಗೂಲಿ ವಿವರಿಸಿದ್ದಾರೆ. ಗಂಗೂಲಿ-ಮಯಾಂಕ್ ಮಾತುಕತೆಯ 'ದಾದಾ ಓಪನ್ಸ್ ವಿತ್ ಮಯಾಂಕ್'ನ ಈ ವಿಡಿಯೋವನ್ನು ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಹಾಗೆಂದು ಗಂಗೂಲಿ ಜತೆಗಿನ ಜತೆಯಾಟದ ವೇಳೆ ಸಚಿನ್ ಮೊದಲ ಇನಿಂಗ್ಸ್ ಎದುರಿಸಿಲ್ಲ ಎಂದಿಲ್ಲ. ಒಂದೆರಡು ಬಾರಿ ಸಚಿನ್ ಕೂಡ ಮೊದಲ ಎಸೆತ ಎದುರಿಸಿದ್ದಾರೆ ಎಂದಿರುವ ಗಂಗೂಲಿ ಅದಕ್ಕೂ ಕಾರಣ ವಿವರಿಸಿದ್ದಾರೆ. 'ಉತ್ತಮ ಮತ್ತು ಕೆಟ್ಟ ಫಾರ್ಮ್ ಎರಡರ ಕಾರಣವನ್ನೂ ಸಚಿನ್ ಹೊಂದಿದ್ದರು. ಆದರೆ ಒಂದೆರಡು ಬಾರಿ ನಾನೇ ಅವರಿಗಿಂತ ಮುನ್ನ ಹೋಗಿ ನಾನ್-ಸ್ಟ್ರೈಕರ್ ಬದಿಯಲ್ಲಿ ನಿಂತಿದ್ದೆ. ಪಂದ್ಯ ಆಗಲೇ ಟಿವಿಯಲ್ಲಿ ನೇರಪ್ರಸಾರವಾಗಲು ಆರಂಭಿಸಿರುತ್ತಿದ್ದರೆ ಅವರೇ ಅನಿವಾರ್ಯವಾಗಿ ಹೋಗಿ ಸ್ಟ್ರೈಕ್ ತೆಗೆದುಕೊಳ್ಳುತ್ತಿದ್ದರು. ಆದರೆ ಇದು ಒಂದು ಅಥವಾ 2 ಬಾರಿ ಅಷ್ಟೇ ನಡೆದಿದೆ' ಎಂದು ಗಂಗೂಲಿ ಹೇಳಿದ್ದಾರೆ.
ಗಂಗೂಲಿ ಮತ್ತು ಸಚಿನ್ ಏಕದಿನ ಕ್ರಿಕೆಟ್ ಜತೆಯಾಟದಲ್ಲಿ ಒಟ್ಟು 176 ಇನಿಂಗ್ಸ್ಗಳಲ್ಲಿ 8,227 ರನ್ ಕೂಡಿಹಾಕಿದ್ದಾರೆ. 47.55ರ ಸರಾಸರಿಯಲ್ಲಿ ಈ ರನ್ ಪೇರಿಸಿದ್ದಾರೆ. ಇವರಿಬ್ಬರ ಹೊರತಾಗಿ ಬೇರೆ ಯಾವ ಆರಂಭಿಕ ಜೋಡಿಯೂ ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 6 ಸಾವಿರಕ್ಕಿಂತ ಅಧಿಕ ರನ್ ಕೂಡಿಹಾಕಿಲ್ಲ. ಗಂಗೂಲಿ ನಂತರದಲ್ಲಿ ವೀರೇಂದ್ರ ಸೆಹ್ವಾಗ್ ಜತೆಗೆ ಇನಿಂಗ್ಸ್ ಆರಂಭಿಸುವಾಗಲೂ ಸಚಿನ್ ತೆಂಡುಲ್ಕರ್ ಇನಿಂಗ್ಸ್ನ ಮೊದಲ ಎಸೆತ ಎದುರಿಸುತ್ತಿರಲಿಲ್ಲ ಎಂಬುದು ಗಮನಾರ್ಹ.