ಕ್ಸಿಯಾಮೆನ್ (ಚೀನಾ): ಭಾರತದ ಅವಿನಾಶ್ ಸಾಬ್ಲೆ ಅವರು ಕ್ಸಿಯಾಮೆನ್ ಚರಣದ ಡೈಮಂಡ್ ಲೀಗ್ನಲ್ಲಿ ಪುರುಷರ 3 ಸಾವಿರ ಮೀಟರ್ ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಸೆಪ್ಟೆಂಬರ್ 16-17ರಂದು ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಸಂಪಾದಿಸಿದ್ದಾರೆ. ಮಹಾರಾಷ್ಟ್ರದ 28 ವರ್ಷದ ಅವಿನಾಶ್ ಡೈಮಂಡ್ ಲೀಗ್ ಫೈನಲ್ಗೇರಿದ ಮೂರನೇ ಭಾರತೀಯರೆನಿಸಿದ್ದಾರೆ.
ಶನಿವಾರ ನಡೆದ ಸ್ಪರ್ಧೆಯಲ್ಲಿ ಅವಿನಾಶ್ 8 ನಿಮಿಷ 16.27 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. ಇದು ಅವರ ಹಾಲಿ ಋತುವಿನ ಶ್ರೇಷ್ಠ ನಿರ್ವಹಣೆ (8:11.63) ಮತ್ತು ರಾಷ್ಟ್ರೀಯ ದಾಖಲೆಗಿಂತ (8:11.20) ಕೆಳಗಿನ ನಿರ್ವಹಣೆಯಾಗಿದೆ. ಈ ಮೂಲಕ ಅವರು 11 ಅಂಕ ಸಂಪಾದಿಸಿ ಇದೇ ಮೊದಲ ಬಾರಿಗೆ ಡೈಮಂಡ್ ಲೀಗ್ ಫೈನಲ್ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು. ಅವಿನಾಶ್ ಈ ಮುನ್ನ ಸ್ಪರ್ಧಿಸಿದ 3 ಡೈಮಂಡ್ ಲೀಗ್ ಚರಣಗಳಲ್ಲಿ ಕ್ರಮವಾಗಿ 10 (ಮೊರಾಕೊ), 5 (ಸ್ಟಾಕ್ಹೋಮ್) ಮತ್ತು 6ನೇ (ಪೋಲೆಂಡ್) ಸ್ಥಾನ ಪಡೆದಿದ್ದರು. ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮತ್ತು ಲಾಂಗ್ ಜಂಪ್ ಪಟು ಮುರಳಿ ಶ್ರೀಶಂಕರ್ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಪಡೆದಿದ್ದ ಮೊದಲಿಬ್ಬರು ಭಾರತೀಯರಾಗಿದ್ದಾರೆ.
ಕ್ಸಿಯಾಮೆನ್ ಡೈಮಂಡ್ ಲೀಗ್ನ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವಿಣ್ ಚಿತ್ರವೇಲ್ 16.42 ಮೀ. ದೂರ ಹಾರಿ 5ನೇ ಸ್ಥಾನ ಪಡೆದರೆ, ಅಬ್ದುಲ್ಲಾ ಅಬೂಬಕರ್ 16.25 ಮೀ. ಹಾರಿ 6ನೇ ಸ್ಥಾನ ಗಳಿಸಿದರು. ಆದರೆ ಇವರಿಬ್ಬರೂ ಡೈಮಂಡ್ ಲೀಗ್ ಫೈನಲ್ಗೇರಲು ವಿಫಲರಾದರು.