ಕ್ರೀಡೆ

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಮತ್ತೊಂದು ನಾಯಕತ್ವ ಬದಲಾವಣೆ! ಪೊಲ್ಲಾರ್ಡ್​ಗೆ ಎಂಐ ಕೇಪ್​ಟೌನ್​ ಸಾರಥ್ಯ

ಕೇಪ್​ಟೌನ್​: ದಕ್ಷಿಣ ಆಫ್ರಿಕಾದ ಟಿ20 ಲೀಗ್​ "ಎಸ್​ಎ20'ರಲ್ಲಿ ಆಡಲಿರುವ ಎಂಐ ಕೇಪ್​ಟೌನ್​ ತಂಡಕ್ಕೆ ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಕೈರಾನ್​ ಪೊಲ್ಲಾರ್ಡ್​ ಹೊಸ ನಾಯಕರಾಗಿ ಭಾನುವಾರ ನೇಮಕಗೊಂಡಿದ್ದಾರೆ. ಜನವರಿ 10ರಂದು ಟೂರ್ನಿ ಆರಂಭಗೊಳ್ಳಲಿದ್ದು, ಅದಕ್ಕೆ 3 ದಿನ ಮುನ್ನ ನಾಯಕತ್ವ ಬದಲಾವಣೆ ಮಾಡಿರುವುದು ಅಚ್ಚರಿ ಎನಿಸಿದೆ.

ಐಪಿಎಲ್​ನಲ್ಲಿ ಆಡುವ ಮುಂಬೈ ಇಂಡಿಯನ್ಸ್​ ತಂಡದ ಒಡೆತನ ಹೊಂದಿರುವ ರಿಲಯನ್ಸ್​ ಗ್ರೂಪ್​ ಎಂಐ ಕೇಪ್​ಟೌನ್​ ತಂಡದ ಮಾಲೀಕತ್ವವನ್ನೂ ಹೊಂದಿದೆ. ಮುಂಬೈ ಇಂಡಿಯನ್ಸ್​ ತಂಡಕ್ಕೆ ರೋಹಿತ್​ ಶರ್ಮ ಬದಲಿಗೆ ಹಾರ್ದಿಕ್​ ಪಾಂಡ್ಯರನ್ನು ನಾಯಕರನ್ನಾಗಿ ನೇಮಿಸಿದ ಅಚ್ಚರಿಯ ಆಯ್ಕೆಯ ಬಳಿಕ ಎಂಐ ಕೇಪ್​ಟೌನ್​ ತಂಡಕ್ಕೂ ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್​ ಖಾನ್​ ಬದಲಿಗೆ ಪೊಲ್ಲಾರ್ಡ್​ರನ್ನು ನಾಯಕರನ್ನಾಗಿ ನೇಮಿಸಿರುವುದು ಕುತೂಹಲ ಕೆರಳಿಸಿದೆ.

ಈ ನಡುವೆ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ದುಬೈನ ಐಎಲ್​ಟಿ20 ಲೀಗ್​ನಲ್ಲಿ ಒಡೆತನ ಹೊಂದಿರುವ ಎಂಐ ಎಮಿರೇಟ್ಸ್​ ತಂಡಕ್ಕೆ ವೆಸ್ಟ್​ ಇಂಡೀಸ್​ನ ನಿಕೋಲಸ್​ ಪೂರನ್​ ನಾಯಕರಾಗಿ ನೇಮಕಗೊಂಡಿದ್ದಾರೆ. ಎಮಿರೇಟ್ಸ್​ಗೆ ಈ ಮುನ್ನ ಪೊಲ್ಲಾರ್ಡ್​ ನಾಯಕರಾಗಿದ್ದರು.