ಸ್ವಿಜರ್ಲೆಂಡ್: ಇತ್ತೀಚೆಗಷ್ಟೇ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಜಾವೆಲಿನ್ ಆಟಗಾರ ನೀರಜ್ ಛೋಪ್ರಾ (24) ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಸ್ವಿಜ್ರ್ಲೆಂಡ್ನ ಲೌಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್ ಪಂದ್ಯದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ, ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲಿಯೇ 89.08 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ನಂತರದ ನಾಲ್ಕು ಪ್ರಯತ್ನಗಳಲ್ಲಿ ಇಷ್ಟು ದೂರ ಎಸೆತ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಮೊದಲ ಎಸೆತವೇ ಅವರಿಗೆ ದಾಖಲೆ ತಂದುಕೊಟ್ಟಿತು. ಇದು ನೀರಜ್ ಅವರ ವೃತ್ತಿಜೀವನದ ಮೂರನೇ ಅತ್ಯುತ್ತಮ ಎಸೆತವಾಗಿದೆ. ನೀರಜ್ ಮೊದಲ ಪ್ರಯತ್ನದಲ್ಲಿ 89.08 ಮೀಟರ್‌ಗಳಷ್ಟು ಜಾವೆಲಿನ್ ಎಸೆದಿದ್ದರೆ, ಎರಡನೇ ಪ್ರಯತ್ನದಲ್ಲಿ 85.18 ಮೀಟರ್ ದೂರ ಎಸೆದಿದ್ದರು. 3ನೇ ಪ್ರಯತ್ನದಲ್ಲಿ ಜಾವೆಲಿನ್ ಎಸೆಯಲು ಸಾಧ್ಯವಾಗಲಿಲ್ಲ, 4ನೇ ಪ್ರಯತ್ನದಲ್ಲಿ ಫೌಲ್ ಮಾಡಿದರು. ಕೊನೆಯ ಪ್ರಯತ್ನದಲ್ಲಿ 80.04 ಮೀಟರ್ ಮಾತ್ರ ಎಸೆದರು. ಆದರೆ ಮೊದಲಿನ ಎಸೆತವೇ ಅವರಿಗೆ ಚಿನ್ನ ತಂದುಕೊಟ್ಟಿತು.
ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗಷ್ಟೇ ಮುಕ್ತಾಯವಾದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿದ್ದರು. ಇನ್ನು ಕಳೆದ ತಿಂಗಳು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸಂದರ್ಭದಲ್ಲಿಯೇ ಅವರು ತೊಡೆಸಂದು ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ನೀರಜ್ , ಕೊನೆಯ ಕ್ಷಣದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿಯುವ ತೀರ್ಮಾನ ಪ್ರಕಟಿಸಿದ್ದರು. ಇದೀಗ ಮತ್ತೆ ಚಿನ್ನದೊಂದಿಗೆ ಮಿಂಚಿದ್ದಾರೆ.
ಚಿನ್ನ ಗೆದ್ದ ನಂತರ ಖುಷಿ ಹಂಚಿಕೊಂಡಿದ್ದಾರೆ ನೀರಜ್. ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಬೇಕಾಯಿತು. ಇದು ನನ್ನನ್ನು ಸ್ವಲ್ಪ ಆತಂಕಕ್ಕೀಡು ಮಾಡಿತ್ತು. ಇದೀಗ ನಾನು ವಾಪಸ್ ಆಗಿದ್ದೇನೆ. ಗಾಯದಿಂದ ಚೇತರಿಸಿಕೊಂಡು 89 ಮೀಟರ್ ದೂರ ಜಾವೆಲಿನ್ ಎಸೆದಿರುವುದು ಸಂತಸ ತಂದಿದೆ ಎಂದಿದ್ದಾರೆ.
ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಜೂನ್ ಮೊದಲ ವಾರದಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ 89.30 ದೂರಕ್ಕೆ ಜಾವೆಲಿನ್ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದುದು ಇಲ್ಲಿ ಉಲ್ಲೇಖಾರ್ಹ.
ಅಂದಹಾಗೆ, 2022ರಲ್ಲಿ ಒಟ್ಟು 13 ಡೈಮಂಡ್ ಲೀಗ್ ಟೂರ್ನಿಗಳು ನಡೆಯಲಿದ್ದು, ಈ ಪೈಕಿ 5 ಟೂರ್ನಿಗಳು ಪುರುಷರ ಜಾವೆಲಿನ್ ಥ್ರೋಗೆ ಸಂಬಂಧಿಸಿದವುಗಳಾಗಿವೆ. ಈಗಾಗಲೇ ಮೇ ತಿಂಗಳಿನಲ್ಲಿ ದೋಹಾದಲ್ಲಿ ಮೊದಲ ಡೈಮಂಡ್ ಲೀಗ್ ನಡೆದಿತ್ತು, ಇದಾದ ಬಳಿಕ ಸ್ಟಾಕೋಹೋಂ, ಸಿಲೀಸಿಯಾ, ಮೊನಾಕೊ ಹಾಗೂ ಲಾಸನ್ನೆಯಲ್ಲಿ ಇನ್ನುಳಿದ ನಾಲ್ಕು ಡೈಮಂಡ್ ಲೀಗ್‌ಗಳು ನಡೆದವು. (ಏಜೆನ್ಸೀಸ್)