ಕ್ರೀಡೆ

ಮದುವೆ ಮನೆಯಲ್ಲಿಯೇ ವರನ ಬ್ಯಾಟಿಂಗ್​- ವಧುವಿನ ಬೌಲಿಂಗ್​: ವಿಡಿಯೋ ವೈರಲ್​

ಚೆನ್ನೈ: ಕೋಲ್ಕತಾ ನೈಟ್‌ ರೈಡರ್ಸ್ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ತಮ್ಮ ದೀರ್ಘ ಕಾಲದ ಪ್ರೇಯಸಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪಿಎಲ್ 2020ಯಲ್ಲಿ ಕೆಕೆಆರ್ ಪರವಾಗಿ ಆಟವಾಡಿದ್ದ ತಮಿಳುನಾಡು ಮೂಲದ ರಿಸ್ಟ್ ಸ್ಪಿನ್ನರ್ ವರುಣ್ ನೇಹಾ ಖೇಡೆಕರ್ ಅವರನ್ನು ವಿವಾಹವಾಗಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ ಈ ವಿವಾಹ ನಡೆದಿದೆ. ಈ ವರ್ಷದ ಮಾರ್ಚ್​ ತಿಂಗಳಿನಲ್ಲಿಯೇ ಇವರು ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಕರೊನಾ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು.

ಕರೊನಾ ಹಿನ್ನೆಲೆಯಲ್ಲಿ ಆಪ್ತ ವಲಯದವರು ಮಾತ್ರ ಮದುವೆಯಲ್ಲಿ ಹಾಜರಿದ್ದರು. ಇದೀಗ ಅವರು ತಮ್ಮ ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಮದುವೆ ಮನೆಯಲ್ಲಿಯೇ ವಧು ನೇಹಾ ಜತೆ ಕ್ರಿಕೆಟ್​ ಆಗಿದ್ದು ಭಾರಿ ವೈರಲ್​ ಆಗುತ್ತಿದೆ. ವರುಣ್​ ಬ್ಯಾಟಿಂಗ್​ ಮಾಡಿದರೆ ವಧು ನೇಹಾ ಬೌಲಿಂಗ್​ ಮಾಡುವ ಮೂಲಕ ಅಭಿಮಾನಿಗಳಿಗೆ ಮದುವೆ ಮನೆಯಲ್ಲಿಯೇ ಕ್ರಿಕೆಟ್​ ರಸದೌತಣ ಬಡಿಸಿದೆ ಈ ಜೋಡಿ.

ಐಪಿಎಲ್‌ನ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸೀಮಿತ ಓವರ್‌ಗಳ ತಂಡಕ್ಕೆ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದರು. ಆದರೆ ದುರಾದೃಷ್ಟವಶಾತ್ ಭುಜದ ನೋವಿನ ಕಾರಣದಿಂದಾಗಿ ಟೀಮ್ ಇಂಡಿಯಾ ಜತೆಗೆ ಪ್ರಯಾಣಿಸುವ ಅವಕಾಶ ಕಳೆದುಕೊಂಡಿದ್ದರು. ಐಪಿಎಲ್​ನಲ್ಲಿ ಇವರು 13 ಪಂದ್ಯಗಳಲ್ಲಿ 17 ವಿಕೆಟ್​ ಪಡೆಯುವುದರ ಮೂಲಕ ಭಾರಿ ಪ್ರಶಂಸೆ ಗಳಿಸಿದ್ದಾರೆ.