ಕ್ರೀಡೆ

ರೈನಾ ಸ್ಥಾನ ತುಂಬುವ ಫೇವರಿಟ್ ಆಟಗಾರ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಅನುಮಾನ

ದುಬೈ: ಕಳೆದ ತಿಂಗಳು ಕರೊನಾ ಪಾಸಿಟಿವ್ ಆಗಿದ್ದ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಸೆ. 19ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ. ಅವರು ಭಾನುವಾರ ಮತ್ತು ಸೋಮವಾರ ಮತ್ತೆ 2 ಬಾರಿ ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದು, ನೆಗೆಟಿವ್ ವರದಿ ಬಂದರೆ ಅಭ್ಯಾಸ ಆರಂಭಿಸಬಹುದಾಗಿದೆ.

ಸುರೇಶ್ ರೈನಾ ಟೂರ್ನಿಯಿಂದ ಹೊರನಡೆದ ಕಾರಣ ಖಾಲಿಯಾಗಿರುವ ಸ್ಥಾನವನ್ನು ಋತುರಾಜ್ ಗಾಯಕ್ವಾಡ್ ತುಂಬುವ ನಿರೀಕ್ಷೆ ಇದೆ. ಆದರೆ ಅವರನ್ನು 1 ವಾರದ ಬಳಿಕವೇ ತಂಡದ ಆಯ್ಕೆಗೆ ಪರಿಗಣಿಸಲಾಗುವುದು. ಹೀಗಾಗಿ ಸಿಎಸ್‌ಕೆ ತಂಡದ 2ನೇ ಪಂದ್ಯಕ್ಕಷ್ಟೇ ಅವರು ಲಭ್ಯರಾಗಲಿದ್ದಾರೆ ಎನ್ನಲಾಗಿದೆ.

ಸಿಎಸ್‌ಕೆ ತಂಡ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಸಿಎಸ್‌ಕೆ ತಂಡಕ್ಕೆ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಒನ್‌ಡೌನ್ ಕ್ರಮಾಂಕದಲ್ಲಿ ಪ್ರಮುಖ ಶಕ್ತಿಯಾಗಿದ್ದರು. ಇದೀಗ ಅವರ ಗೈರಿನಲ್ಲಿ ಮಹಾರಾಷ್ಟ್ರದ 23 ವರ್ಷದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್‌ಗೆ ಸಿಎಸ್‌ಕೆ ತಂಡ ಈ ಜವಾಬ್ದಾರಿಯುತ ಸ್ಥಾನವನ್ನು ವಹಿಸುವ ನಿರೀಕ್ಷೆ ಇದೆ.

ಈಗಾಗಲೆ ಭಾರತ ಎ ತಂಡದ ಪರ ಗಮನಾರ್ಹ ನಿರ್ವಹಣೆ ತೋರಿರುವ ಋತುರಾಜ್, 2018ರಿಂದ ಸಿಎಸ್‌ಕೆ ತಂಡದಲ್ಲಿದ್ದರೂ, ಒಂದೂ ಪಂದ್ಯವಾಡಿಲ್ಲ.

ಪಾಸಿಟಿವ್ ಆಗಿದ್ದ ಸಿಎಸ್‌ಕೆ ವೇಗಿ ದೀಪಕ್ ಚಹರ್ ಈಗಾಗಲೆ ಅಭ್ಯಾಸ ಆರಂಭಿಸಿದ್ದರೆ, ಇತರ 11 ಸಿಬ್ಬಂದಿ ಕೂಡ ನೆಗೆಟಿವ್ ವರದಿ ಬಂದ ಬಳಿಕ ಫ್ರಾಂಚೈಸಿಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.