ದೆಹಲಿ: ಪ್ರಸ್ತುತ ಐಪಿಎಲ್ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಈ ಬಾರಿ ಕಪ್ನ್ನು ಯಾರು ಗೆಲ್ಲುತ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಋತುರಾಜ್ ಗಾಯಕ್ವಾಡ್ ಐಪಿಎಲ್ ಬಳಿಕ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಶುಭ ಸುದ್ದಿಯೊಂದು ಹೊರಬಿದ್ದಿದೆ.
ಈ ಹಿನ್ನೆಲೆಯಲ್ಲಿ ಋತುರಾಜ್ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳನ್ನು ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್ 2 ಮತ್ತು 3ರಂದು ಮದುವೆ ಸಮಾರಂಭವಿರುವ ಕಾರಣ ಈ ಪಂದ್ಯಗಳಿಗೆ ಗೈರಾಗಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಅಲಭ್ಯರಾಗಿದ್ದಾರೆ. ಜೂನ್ 7ರಂದು ಇಂಗ್ಲೆಂಡ್ನ ಲಂಡನ್ನ ದಿ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಭಾರತ-ಆಸ್ಟ್ರೇಲಿಯಾ ಸೆಣಸಾಟ ನಡೆಸಲಿವೆ.
ಇನ್ನು ಋತುರಾಜ್ ಹಾಗೂ ಮಹಾರಾಷ್ಟ್ರದ ಕ್ರಿಕೆಟ್ ಆಟಗಾರ್ತಿ ಉತ್ಕರ್ಷ ಪವಾರ್ ಮದುವೆ ನಡೆಯಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಎರಡೂ ಕುಟುಂಬಗಳು ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಕೆಲ ದಿನಗಳ ಹಿಂದೆ ಇವರಿಬ್ಬರು ಜಿಮ್‌ನಲ್ಲಿ ಒಟ್ಟಿಗೆ ತೆಗೆಸಿಕೊಂಡ ಫೋಟೋವೊಂದು ಭಾರೀ ವೈರಲ್ ಆಗಿತ್ತು.(ಏಜೆನ್ಸೀಸ್)