ಕ್ರೀಡೆ

ಅವಿಕಾ ಜತೆ ಆಂಡ್ರೆ ರೆಸೆಲ್ ಮಸ್ತ್​ ಡಾನ್ಸ್​! ಕೆರಿಬಿಯನ್ ಹೀರೋ​​ ಸ್ಟೈಲಿಶ್​ ಅವತಾರಕ್ಕೆ ಫ್ಯಾನ್ಸ್​ ಫಿದಾ

ನವದೆಹಲಿ: ಕೆರಿಬಿಯನ್ ಕ್ರಿಕೆಟ್​ ಲೋಕದ ಹೀರೋ ಆಂಡ್ರೆ ರಸೆಲ್ ಓರ್ವ ಉತ್ತಮ ಆಲ್​ರೌಂಡರ್​. ಬೌಲಿಂಗ್​ ಮಾತ್ರವಲ್ಲದೆ, ಬ್ಯಾಟಿಂಗ್​ನಲ್ಲೂ ಬಿರುಗಾಳಿ ಎಬ್ಬಿಸುತ್ತಾರೆ. ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ವೆಸ್ಟ್ ಇಂಡೀಸ್ ಹೀರೋ ಪ್ರಸ್ತುತ ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ ನೈಟ್​ ರೈಡರ್ಸ್​ ಪರ ಆಡುತ್ತಿದ್ದಾರೆ. ರಸೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ನೃತ್ಯ ಪ್ರತಿಭೆಯನ್ನೂ ಹೊಂದಿದ್ದಾರೆ. ಇತ್ತೀಚೆಗೆ ಸ್ಟಾರ್ ಹೀರೋಯಿನ್ ಜೊತೆ ಮಾಸ್ ಸ್ಟೆಪ್ಸ್ ಹಾಕಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಂಡೀಸ್​ ಕ್ರಿಕೆಟಿಗರು ಮೈದಾನದಲ್ಲಿ ಚುರುಕಾಗಿರುವುದು ಗೊತ್ತೇ ಇದೆ. ವಿಕೆಟ್ ಪಡೆಯಲಿ, ಸಿಕ್ಸರ್ ಸಿಡಿಸಲಿ ಅಥವಾ ಶತಕಗಳನ್ನು ಬಾರಿಸಲಿ ಅದನ್ನು ವಿಚಿತ್ರ ರೀತಿಯಲ್ಲಿ ಆಚರಿಸುತ್ತಾರೆ. ತಮ್ಮದೇಯಾದ ರೀತಿಯಲ್ಲಿ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ಯೂನಿವರ್ಸಲ್​ ಬಾಸ್​ ಕ್ರಿಸ್ ಗೇಲ್ ಮತ್ತು ಡ್ವೇನ್ ಬ್ರಾವೋ ಇದಕ್ಕೆ ಉತ್ತಮ ಉದಾಹರಣೆ. ಆದರೆ, ಮತ್ತೊಬ್ಬ ಕೆರಿಬಿಯನ್ ಹೀರೋ ಆಂಡ್ರೆ ರಸೆಲ್ ಕೂಡ ಹಾಗೆ ಇದಾರೆ. ತಮ್ಮ ಅದ್ಭುತ ಹೆಜ್ಜೆಗಳ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದಾರೆ. ಟಾಲಿವುಡ್​ನ ಖ್ಯಾತ ನಟಿ ಅವಿಕಾ ಗೋರ್ ಜೊತೆ ರಸೆಲ್​ ಮಸ್ತ್​ ಸ್ಟೆಪ್ಸ್​ ಹಾಕಿರುವ ಹಾಡೊಂದು ಇದೀಗ ಬಿಡುಗಡೆಯಾಗಿದೆ. ‘ಲಡ್ಕಿ ತು ಕಮಲ್ ಕಿ’ ಎನ್ನುವ ಈ ಹಾಡು ಈಗ ಯೂಟ್ಯೂಬ್​ನಲ್ಲಿ ರಾರಾಜಿಸುತ್ತಿದೆ.

ಈ ಹಾಡಿನಲ್ಲಿ ಅವಿಕಾ ಗೋರ್ ನೀಲಿ ಸೀರೆಯಲ್ಲಿ ಮಿಂಚಿದ್ದಾರೆ ಮತ್ತು ಬೋಲ್ಡ್​ ಆಗಿ ಸೊಂಟ ಬಳುಕಿಸಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಆಂಡ್ರೆ ರಸೆಲ್ ವಿಶೇಷ ಆಕರ್ಷಣೆಯಾಗಿದ್ದಾರೆ. ಆರೆಂಜ್ ಕಲರ್ ಲುಂಗಿ, ಕಪ್ಪು ಬಣ್ಣದ ಬನಿಯನ್ ಹಾಗೂ ಸ್ಟೈಲಿಶ್ ಶರ್ಟ್​ ಧರಿಸಿ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಗೂ ಕೈಯಲ್ಲಿ ವಾಚ್ ಹಾಕಿಕೊಂಡು ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ.

ಅವಿಕಾ ಗೋರ್ ಸಮಾನವಾಗಿ ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಸೆಲ್​ ನಗುನಗುತ್ತಾ ಕೂಲ್ ಆಗಿ ಇಟ್ಟಿರುವ ಹೆಜ್ಜೆಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಈ ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 198 ರನ್ ಗಳಿಸಿರುವ ರಸೆಲ್, ಬೌಲಿಂಗ್‌ನಲ್ಲೂ ಮಿಂಚಿದ್ದು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂದಹಾಗೆ ರಸೆಲ್-ಅವಿಕಾ ಗೋರ್ ನೃತ್ಯವನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್‌ಗಳ ರೂಪದಲ್ಲಿ ನಮಗೆ ತಿಳಿಸಿ. (ಏಜೆನ್ಸೀಸ್​)