ಕ್ರೀಡೆ

ಕೊನೇಕ್ಷಣದಲ್ಲಿ ಪ್ಯಾರಾಲಿಂಪಿಕ್ಸ್​ ತಂಡ ಸೇರಿದ್ದ ರುಬಿನಾ ಫ್ರಾನ್ಸಿಸ್​ ಈಗ ಕಂಚಿನ ತಾರೆ!

ಪ್ಯಾರಿಸ್​: ಭಾರತದ ಪಿಸ್ತೂಲ್​ ಶೂಟರ್​ ರುಬಿನಾ ಫ್ರಾನ್ಸಿಸ್​ ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ ಕ್ರೀಡಾಸ್ಪರ್ಧೆಯ 3ನೇ ದಿನವಾದ ಶನಿವಾರ ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದರೊಂದಿಗೆ ಭಾರತ ಕೂಟದಲ್ಲಿ ಗೆದ್ದ ಪದಕಗಳ ಸಂಖ್ಯೆ 5ಕ್ಕೇರಿದೆ. ಈ ಪೈಕಿ ಶೂಟಿಂಗ್​ನಲ್ಲೇ 4 ಪದಕಗಳು ಒಲಿದಿವೆ. ಆದರೆ ಅದೃಷ್ಟದ ಬಲ ಇರದಿದ್ದರೆ ರುಬಿನಾ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಿಂದ ವಂಚಿತರಾಗುತ್ತಿದ್ದರು. ಪ್ಯಾರಿಸ್​ಗೆ ಭಾರತ ತಂಡ ತೆರಳುವುದಕ್ಕೆ ಕೆಲವೇ ದಿನ ಮುನ್ನ ರುಬಿನಾ ವೈಲ್ಡ್​ಕಾರ್ಡ್​ ಮೂಲಕ ಪ್ಯಾರಾಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ್ದರು. ಇದೀಗ ಅವರು ಪದಕ ವಿಜೇತೆಯಾಗಿ ಹೊರಹೊಮ್ಮಿರುವುದು ವಿಶೇಷವೆನಿಸಿದೆ.

ಮಧ್ಯ ಪ್ರದೇಶದ 25 ವರ್ಷದ ರುಬಿನಾ ಮಹಿಳೆಯರ 10 ಮೀ. ಏರ್​ ಪಿಸ್ತೂಲ್​ ಎಸ್​ಎಚ್​1 ವಿಭಾಗದ ಫೈನಲ್​ನಲ್ಲಿ 211.1 ಅಂಕ ಕಲೆಹಾಕುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆದಿದ್ದ ರುಬಿನಾ, ಅಗ್ರ 8 ಶೂಟರ್​ಗಳ ಫೈನಲ್​ನಲ್ಲಿ ಅಮೋಘ ನಿರ್ವಹಣೆ ತೋರಿಸಿದರು. ರುಬಿನಾ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಪಿಸ್ತೂಲ್​ ಶೂಟರ್​ ಆಗಿದ್ದಾರೆ. ಇರಾನ್​ನ ಜವನ್​ಮರ್ಡಿ ಸರೇಹ್​ (236.8) ಸತತ 3ನೇ ಬಾರಿ ಸ್ವರ್ಣ ಪದಕ ಒಲಿಸಿಕೊಂಡರೆ, ಟರ್ಕಿಯ ಒಜ್ಗನ್​ ಐಸೆಲ್​ (231.1) ರಜತ ಪದಕ ಗೆದ್ದುಕೊಂಡರು.

ಕಳೆದ ವರ್ಷ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲೂ ಅವರು ಕಂಚಿನ ಪದಕ ಗೆದ್ದಿದ್ದರು.

ಮೆಕ್ಯಾನಿಕ್​ ಪುತ್ರಿಯಾಗಿರುವ ರುಬಿನಾ, ಜನಿಸುವಾಗಲೇ ಕಾಲಿನ ಊನತೆ ಹೊಂದಿದ್ದರು. ಒಲಿಂಪಿಕ್ಸ್​ ಪದಕ ವಿಜೇತ ಶೂಟರ್​ ಗಗನ್​ ನಾರಂಗ್​ ಸ್ಫೂರ್ತಿಯಲ್ಲಿ ಅವರು ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದರು. 3 ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲೂ ಸ್ಪರ್ಧಿಸಿದ್ದ ಅವರು 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.