ನವದೆಹಲಿ: ಐಪಿಎಲ್-2025 ಮೆಗಾ ಹರಾಜಿಗೆ ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆಟಗಾರ ರೀಟೇನ್ ಮತ್ತು ರಿಲೀಸ್ ಪಟ್ಟಿ ಬಿಡುಗಡೆಯಾಗಲಿದೆ. ಈ ಬಾರಿಯ ಐಪಿಎಲ್ ಹರಾಜು ಸಾಕಷ್ಟು ಬದಲಾವಣೆಗಳೊಂದಿಗೆ ಹೊಸತನದಿಂದ ಕೂಡಿರಲಿದೆ. ಘಟಾನುಘಟಿ ಆಟಗಾರರು ಕೂಡ ಹರಾಜು ಕಣಕ್ಕೆ ಇಳಿಯುವ ಸಾಧ್ಯತೆ. ಹೀಗಾಗಿ ಐಪಿಎಲ್ ಹರಾಜು ಇತಿಹಾಸದಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗಲಿದೆ ಎನ್ನಲಾಗಿದೆ.
ಐಪಿಎಲ್ ಹರಾಜಿಗೂ ಮುನ್ನವೇ ರೋಹಿತ್ ಶರ್ಮ ಕುರಿತು ಒಂದು ವದಂತಿ ಹರಿದಾಡುತ್ತಿದೆ. ನಿಮಗೆ ಗೊತ್ತಿರಬಹುದು ಐಪಿಎಲ್ 2024 ಸೀಸನ್‌ನಲ್ಲಿ ರೋಹಿತ್ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸಲಾಯಿತು. ಕಳೆದ ವರ್ಷ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹಿಟ್‌ಮ್ಯಾನ್ ಆಡಿದ್ದರು. ನಾಯಕತ್ವದಿಂದ ಕೆಳಗಿಳಿದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ರೋಹಿತ್, ಐಪಿಎಲ್ 2025ಕ್ಕೂ ಮುನ್ನ ಮತ್ತೊಂದು ಫ್ರಾಂಚೈಸಿಗೆ ತೆರಳಲಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ, ಮುಂಬರುವ ಮೆಗಾ ಹರಾಜಿನಲ್ಲಿ ರೋಹಿತ್ ಶರ್ಮ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ರೋಹಿತ್ ಖರೀದಿ ಮಾಡಲು ಅನೇಕ ಫ್ರಾಂಚೈಸಿಗಳು ಆಸಕ್ತಿ ತೋರಿವೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಇದೀಗ ಮತ್ತೊಂದು ವದಂತಿ ಹರಿದಾಡುತ್ತಿದೆ. ಅದೇನೆಂದರೆ, ಲಖನೌ ಸೂಪರ್ ಜೇಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ರೋಹಿತ್ಗೆ 50 ಕೋಟಿ ರೂ. ಓಪನ್ ಆಫರ್ ನೀಡಿದ್ದಾರೆನ್ನಲಾಗಿದೆ. ಈ ವದಂತಿಯ ಬಗ್ಗೆ ಗೋಯೆಂಕಾ ಅವರು ಸ್ಫೋರ್ಟ್ಸ್ ಟಾಕ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನೀವು ನನಗೆ ಒಂದು ವಿಷಯ ಹೇಳಿ, ರೋಹಿತ್ ಶರ್ಮ ಹರಾಜಿಗೆ ಬರುತ್ತಾರಾ? ಇಲ್ಲವಾ? ಈ ಬಗ್ಗೆ ನಿಮಗೆ ಅಥವಾ ಯಾರಿಗಾದರೂ ತಿಳಿದಿದೆಯೇ? ಇದೆಲ್ಲ ಊಹಾಪೋಹಗಳಷ್ಟೆ. ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಅವರನ್ನು ಬಿಡುಗಡೆ ಮಾಡುತ್ತದೆಯೋ? ಇಲ್ಲವೋ? ಇನ್ನು ಖಚಿತವಾಗಿಲ್ಲ. ನೀವು ಒಬ್ಬ ಆಟಗಾರನಿಗೆ ನಿಮ್ಮ ಸಂಬಳದ ಮಿತಿಯ ಶೇ. 50 ರಷ್ಟನ್ನು ಬಳಸಲು ಹೋದರೆ, ನೀವು ಇತರ 22 ಆಟಗಾರರನ್ನು ಹೇಗೆ ನಿರ್ವಹಿಸುತ್ತೀರಿ? ಎಂದು ಸಂಜೀವ್ ಗೋಯೆಂಕಾ ಪ್ರಶ್ನೆ ಮಾಡಿದರು.
ನಿಮ್ಮ ಇಚ್ಛೆಯ ಪಟ್ಟಿಯಲ್ಲಿ ರೋಹಿತ್ ಇದ್ದಾರಾ? ಎಂದು ಆ್ಯಂಕರ್ ಪ್ರಶ್ನೆ ಮಾಡಿದಾಗ, ಇಲ್ಲಿ ಪ್ರತಿಯೊಬ್ಬರೂ ತಮ್ಮ ಇಚ್ಛೆಯ ಪಟ್ಟಿಯನ್ನು ಹೊಂದಿದ್ದಾರೆ. ತಮ್ಮ ತಂಡದಲ್ಲಿ ಉತ್ತಮ ಆಟಗಾರ, ಅತ್ಯುತ್ತಮ ನಾಯಕ ಇರಬೇಕೆಂದು ಬಯಸುತ್ತಾರೆ. ಆದರೆ, ಇಲ್ಲಿ ಬಯಸುವ ವಿಚಾರ ಬರುವುದಿಲ್ಲ, ನೀವು ಏನು ಪಡೆದುಕೊಂಡಿದ್ದೀರಿ ಮತ್ತು ಏನು ಲಭ್ಯವಿದೆ ಹಾಗೂ ಅದರೊಂದಿಗೆ ನೀವು ಏನು ಮಾಡಬಹುದು ಎನ್ನುವುದು ಮುಖ್ಯವಾಗುತ್ತದೆ. ಎಲ್ಲರನ್ನೂ ಖರೀದಿಸಲು ಆಗುವುದಿಲ್ಲ ಎಂದು ಗೋಯೆಂಕಾ ಹೇಳಿದರು. (ಏಜೆನ್ಸೀಸ್)