ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣ "ಎಕ್ಸ್'ನಲ್ಲಿ ಕನ್ನಡ ಬರವಣಿಗೆಯ ಪೋಸ್ಟ್ಗಳಿಗಾಗಿ ಪ್ರತ್ಯೇಕ ಖಾತೆಯನ್ನು ತೆರೆದಾಗ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ಅದರ ಬೆನ್ನಲ್ಲೇ ಹಿಂದಿ ಪೋಸ್ಟ್ಗಳಿಗಾಗಿ ಮತ್ತೊಂದು ಖಾತೆ ತೆರೆದ ಬೆನ್ನಲ್ಲೇ ಅಭಿಮಾನಿಗಳಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಸಹಿತ ಕರ್ನಾಟಕದ ಪ್ರಮುಖ ಕ್ರಿಕೆಟಿಗರನ್ನು ಕಡೆಗಣಿಸಿದ ಬೆನ್ನಲ್ಲೇ, ಹಿಂದಿ ಹೇರಿಕೆಗೆ ಮುಂದಾಗಿರುವುದು ಕನ್ನಡಿಗರನ್ನು ಕೆರಳಿಸಿದೆ. ಹಿಂದಿ ಖಾತೆಯಿಂದ ಆರ್ಸಿಬಿ ಮಾಡಿದ ಮೊದಲ ಪೋಸ್ಟ್ನಲ್ಲಿ ವಿರಾಟ್ ಕೊಹ್ಲಿ ಹಿಂದಿಯಲ್ಲೇ ಮಾತನಾಡಿದ್ದರು. ಬಳಿಕ ಕೃತಕ ಬುದ್ದಿಮತ್ತೆ ಬಳಸಿ ಇದೇ ವಿಡಿಯೋವನ್ನು ಕೊಹ್ಲಿ ಕನ್ನಡದಲ್ಲಿ ಮಾತನಾಡಿದಂತೆ ಕನ್ನಡದ ಖಾತೆಯಿಂದ ಪೋಸ್ಟ್ ಮಾಡಿತ್ತು.
"ಬೆಂಗಳೂರು ಎಂದರೆ ಕನ್ನಡ ಸಂಸತಿ ಮತ್ತು ಭಾಷೆ. ಹೀಗಾಗಿ ಆರ್ಸಿಬಿ ತಂಡ ಸ್ಥಳಿಯ ಭಾಷೆಯನ್ನು ಬಳಸಬೇಕು. ಅಭಿಮಾನಿಗಳೊಂದಿಗೆ ಸಂವಹನಕ್ಕಾಗಿ ಕನ್ನಡ-ಇಂಗ್ಲಿಷ್ ಮಾತ್ರ ಬಳಸಬೇಕು. ಹಿಂದಿ ಹೇರಿಕೆ ನಿಲ್ಲಿಸಬೇಕು' ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ನಡುವೆ ಆರ್ಸಿಬಿ ವಲಯದಿಂದ ಹಿಂದಿ ಖಾತೆಗೆ ಸಮರ್ಥನೆಯೂ ಬಂದಿದ್ದು, ಆರ್ಸಿಬಿ ತಂಡ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದೆ. ಹೀಗಾಗಿ ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ಹಿಂದಿ ಭಾಷೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಲಾಗಿದೆ.