ಕ್ರೀಡೆ

ಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರರ ಕ್ವಾರಂಟೈನ್ ಶುರು

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಗಾಗಿ ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡದ ಆಟಗಾರರ 7 ದಿನಗಳ ಹೋಟೆಲ್ ಕ್ವಾರಂಟೈನ್ ಶುಕ್ರವಾರ ನಗರದಲ್ಲಿ ಆರಂಭಗೊಂಡಿದೆ.

ಬಿಸಿಸಿಐ ನೀಡಿರುವ ಗುಣಮಟ್ಟದ ಕಾರ್ಯವಿಧಾನದ (ಎಸ್‌ಒಪಿ) ಮಾರ್ಗಸೂಚಿಯ ಬಗ್ಗೆ ಆಟಗಾರರಿಗೆ ವಿವರಿಸಲಾಗಿದೆ ಎಂದು ಆರ್‌ಸಿಬಿ ಚೇರ್ಮನ್ ಸಂಜೀವ್ ಚುರಿವಾಲಾ ತಿಳಿಸಿದ್ದಾರೆ. ಕ್ವಾರಂಟೈನ್ ಅವಧಿಯಲ್ಲಿ ಎಲ್ಲ ಆಟಗಾರರು 2 ಬಾರಿ ನೆಗೆಟಿವ್ ವರದಿ ಪಡೆದುಕೊಳ್ಳಬೇಕಾಗಿದೆ. ಆಟಗಾರರ ಕೋವಿಡ್-19 ಪರೀಕ್ಷೆಗಾಗಿ ಪ್ರತಿಷ್ಠಿತ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. 2 ಬಾರಿ ನೆಗೆಟಿವ್ ವರದಿ ಪಡೆದುಕೊಂಡವರು ಮಾತ್ರ ಯುಎಇಗೆ ಬಾಡಿಗೆ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ ಎಂದು ಚುರಿವಾಲಾ ತಿಳಿಸಿದ್ದಾರೆ. ವಿದೇಶಿ ಆಟಗಾರರು ಯುಎಇಯಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಕ್ವಾರಂಟೈನ್ ಅವಧಿಯಲ್ಲಿ ತಂಡದ ಕೋಚ್ ಮೈಕ್ ಹೆಸ್ಸನ್ ಮತ್ತು ಸಹಾಯಕ ಕೋಚ್ ಸೈಮನ್ ಕಾಟಿಚ್ ವರ್ಚುವಲ್ ಸಭೆಯ ಮೂಲಕ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ ಮತ್ತು ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ.

ಆರ್‌ಸಿಬಿ ತಂಡದ ಭಾರತೀಯ ಆಟಗಾರರು: ವಿರಾಟ್ ಕೊಹ್ಲಿ, ಮೊಹಮದ್ ಸಿರಾಜ್, ಶಹಬಾಜ್ ಅಹ್ಮದ್, ಪಾರ್ಥಿವ್ ಪಟೇಲ್, ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಪವನ್ ನೇಗಿ, ದೇವದತ್ ಪಡಿಕಲ್, ಶಿವಂ ದುಬೆ, ಉಮೇಶ್ ಯಾದವ್, ಗುರುಕೀರತ್ ಸಿಂಗ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ.