ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಬುಧವಾರದಿಂದ ನಡೆಯಲಿದ್ದು, ಭಾರತ ತಂಡ ಸರಣಿ ಸಮಬಲ ಸಾಧಿಸುವ ಅವಕಾಶವನ್ನಷ್ಟೇ ಹೊಂದಿದೆ.
ಭಾರತ ತಂಡ ದ. ಆಫ್ರಿಕಾದಲ್ಲಿ ಈ ಹಿಂದೆ ಆಡಿದ 8 ಟೆಸ್ಟ್ ಸರಣಿಗಳಲ್ಲಿ 7ರಲ್ಲಿ ಸೋತಿದ್ದು, 2011-12ರಲ್ಲಿ ಏಕೈಕ ಬಾರಿ ಎಂಎಸ್ ಧೋನಿ ಸಾರಥ್ಯದಲ್ಲಿ ಆಡಿದ ಸರಣಿಯಲ್ಲಿ ಸಮಬಲದ ಗೌರವ ಕಂಡಿತ್ತು. ಇದೀಗ ಆ ಸಾಧನೆಯನ್ನು ಸರಿಗಟ್ಟುವ ಅವಕಾಶ ಭಾರತದ ಮುಂದಿದೆ. ಇದನ್ನು ಸಾಧ್ಯವಾಗಿಸಿದರೆ, ರೋಹಿತ್ ಶರ್ಮ ಟೆಸ್ಟ್ ಸರಣಿ ಸೋಲಿಲ್ಲದೆ ದ. ಆಫ್ರಿಕಾದಿಂದ ನಿರ್ಗಮಿಸಿದ ಭಾರತದ 2ನೇ ನಾಯಕ ಎನಿಸಲಿದ್ದಾರೆ.
ಎಲ್ಗರ್ಗೆ ವಿದಾಯ ಟೆಸ್ಟ್
ಎಡಗೈ ಆರಂಭಿಕ ಡೀನ್ ಎಲ್ಗರ್ಗೆ ಇದು ವೃತ್ತೀಜಿವನದ 86ನೇ ಹಾಗೂ ಕೊನೇ ಟೆಸ್ಟ್ ಪಂದ್ಯವಾಗಿರಲಿದೆ. ಇದೇ ತನ್ನ ಕೊನೇ ಸರಣಿ ಎಂದು ಈ ಮೊದಲೇ ಘೋಷಿಸಿದ್ದ 36 ವರ್ಷದ ಎಲ್ಗರ್ಗೆ ಇದೀಗ ಕೊನೇ ಟೆಸ್ಟ್ನಲ್ಲಿ ನಾಯಕತ್ವವೂ ಒಲಿದುಬಂದಿರುವುದು ವಿಶೇಷ. ಮೊದಲ ಟೆಸ್ಟ್ನಲ್ಲಿ ಮೊದಲ ದಿನವೇ ಟೆಂಬಾ ಬವುಮಾ ಗಾಯಗೊಂಡ ಬಳಿಕ ಹಂಗಾಮಿ ನಾಯಕರಾಗಿ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ್ದ ಎಲ್ಗರ್ಗೆ ಈ ಹಿಂದೆಯೂ 17 ಟೆಸ್ಟ್ಗಳಲ್ಲಿ ದ. ಆಫ್ರಿಕಾವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಭಾರತ ವರ್ಷವಿಡೀ ಟೆಸ್ಟ್!
ಇದು ಟಿ20 ವಿಶ್ವಕಪ್ ಒಳಗೊಂಡಿರುವ ವರ್ಷವಾದರೂ, ಭಾರತ ತಂಡ ಈ ವರ್ಷ ಟಿ20, ಏಕದಿನಕ್ಕಿಂತ ಅಧಿಕ ಟೆಸ್ಟ್ ಪಂದ್ಯವನ್ನೇ ಆಡಲಿದೆ. ಭಾರತ ಈ ವರ್ಷ ಆಡಲಿರುವ 15 ಟೆಸ್ಟ್ಗಳಲ್ಲಿ ಇದು ಮೊದಲ ಟೆಸ್ಟ್ ಆಗಿದೆ. ನಂತರ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 5 ಟೆಸ್ಟ್ ಪಂದ್ಯ ಆಡಲಿದ್ದರೆ, ತವರಿನಲ್ಲೇ ಮತ್ತೆ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಆಡಲಿದೆ. ವರ್ಷಾಂತ್ಯಕ್ಕೆ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೆಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪೈಕಿ ಸರಣಿಯ ಕೊನೇ ಟೆಸ್ಟ್ 2025ರ ಆರಂಭದಲ್ಲಿ ನಡೆಯಲಿದೆ. ಇಂಗ್ಲೆಂಡ್ (17) ಹಾಲಿ ವರ್ಷ ಭಾರತಕ್ಕಿಂತ ಅಧಿಕ ಟೆಸ್ಟ್ ಆಡಲಿರುವ ತಂಡವಾಗಿದೆ.
ರ್ಯಾಂಕಿಂಗ್ನಲ್ಲಿ ಕುಸಿತ ಭೀತಿ
ಭಾರತ ತಂಡ ಸದ್ಯ ಐಸಿಸಿಯ ಟಿ20, ಏಕದಿನ, ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟದಲ್ಲಿದೆ. ಆದರೆ ಭಾರತ ತಂಡ ಕೊನೇ ಟೆಸ್ಟ್ನಲ್ಲಿ ಗೆದ್ದರೂ, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕೆ ಕುಸಿಯಲಿದ್ದು, ಆಸ್ಟ್ರೆಲಿಯಾ ಅಗ್ರಸ್ಥಾನಕ್ಕೇರಲಿದೆ. ಒಂದು ವೇಳೆ ಭಾರತ ಕೊನೇ ಟೆಸ್ಟ್ನಲ್ಲಿ ಕನಿಷ್ಠ ಡ್ರಾ ಸಾಧಿಸಿ ಸರಣಿ ಸೋತರೂ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನಕ್ಕೆ ಕುಸಿಯಲಿದೆ. ಆಗ ಇಂಗ್ಲೆಂಡ್ 2ನೇ ಸ್ಥಾನಕ್ಕೇರಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲೂ ಭಾರತ ಮೇಲೇರಲು ಗೆಲುವು ಅಗತ್ಯವಾಗಿದೆ.