ಕ್ರೀಡೆ

ರೋಹಿತ್​​ ಶರ್ಮ ಐಪಿಎಲ್​ ಮೆಗಾ ಹರಾಜಿಗೆ ಬಂದ್ರೆ 50 ಕೋಟಿ ರೂ. ಕೊಡಲು ರೆಡಿಯಾಗಿವೆ ಈ 2 ಫ್ರಾಂಚೈಸಿ?

ನವದೆಹಲಿ: ಟೀಮ್​ ಇಂಡಿಯಾ ನಾಯಕ ಮತ್ತು ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಶರ್ಮಗಾಗಿ ದೆಹಲಿ ಮತ್ತು ಲಖನೌ ಫ್ರಾಂಚೈಸಿಗಳು ತುಂಬಾ ಪೈಪೋಟಿ ನಡೆಸುತ್ತಿವೆ ಎಂದು ತಿಳಿದುಬಂದಿದೆ. ಏನಾದರೂ ರೋಹಿತ್, ಮುಂಬೈ ಇಂಡಿಯನ್ಸ್ ತಂಡ ತೊರೆದು ಹರಾಜಿಗೆ ಬಂದರೆ 50 ಕೋಟಿ ರೂ. ಕೊಡಲು ಕೂಡ ಈ ಎರಡು ತಂಡಗಳು ರೆಡಿಯಾಗಿವೆ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿದೆ.

ಈ ಎರಡೂ ಫ್ರಾಂಚೈಸಿಗಳು ರೋಹಿತ್​ ಖರೀದಿ ಮಾಡಲು ತಮ್ಮ ಪರ್ಸ್​ನಲ್ಲಿ 50 ಕೋಟಿ ರೂ. ಉಳಿಸಿಕೊಂಡಿವೆ ಎಂದು ತಿಳಿದುಬಂದಿದೆ. ಈ ಎರಡೂ ಫ್ರಾಂಚೈಸಿಗಳು ಇದುವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿಲ್ಲ. ಈ ಹಿನ್ನಲೆಯಲ್ಲಿ ಐದು ಐಪಿಎಲ್​ ಟ್ರೋಫಿಗಳನ್ನು ಮುಂಬೈ ತಂಡಕ್ಕೆ ಗೆಲ್ಲಿಸಿಕೊಟ್ಟಿರುವ ರೋಹಿತ್​ರನ್ನು ಹೇಗಾದರೂ ಮಾಡಿ ತಮ್ಮ ತಂಡಕ್ಕೆ ತೆಗೆದುಕೊಳ್ಳಬೇಕು ಎಂದು ಪೈಪೋಟಿಗೆ ಬಿದ್ದಿವೆ ಎನ್ನಲಾಗಿದೆ.

ರೋಹಿತ್ ಶರ್ಮ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್​ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಪ್ರದರ್ಶನ ನೀಡಿ, 5 ಐಪಿಎಲ್​ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಹೀಗಿದ್ದರೂ ಕಳೆದ ಸೀಸನ್​ನಲ್ಲಿ ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಆ ಸ್ಥಾನಕ್ಕೆ ಹಾರ್ದಿಕ್​ ಪಾಂಡ್ಯ ಅವರನ್ನು ನೇಮಿಸಲಾಗಿದೆ.

ಒಂದು ವೇಳೆ ಮುಂಬೈ ತಂಡದಿಂದ ರೋಹಿತ್​ ಹೊರಬಂದರೆ ಅಥವಾ ಮುಂಬೈ ತಂಡವೇ ರೋಹಿತ್​ ಅವರನ್ನು ಬಿಡುಗಡೆ ಮಾಡಿದರೆ ಮುಂಬರುವ ಮೆಗಾ ಹರಾಜಿನಲ್ಲಿ ರೋಹಿತ್​ ಶರ್ಮ ಕೋಟ್ಯಂತರ ರೂಪಾಯಿಗೆ ಬಿಕರಿ ಆಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಯುತ್ತಿದೆ.

ಮುಂಬೈ ತಂಡದೊಂದಿಗೆ ರೋಹಿತ್‌ಗೆ ಹಳೆಯ ಒಡನಾಟವಿದೆ. ರೋಹಿತ್​ ಅವರು ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಕ್ಕನ್ ಚಾರ್ಜಸ್​ನಿಂದ ಪ್ರಾರಂಭಿಸಿದರು. ಮೊದಲ ಮೂರು ಸೀಸನ್​ ನಂತರ ಮುಂಬೈ ಇಂಡಿಯನ್ಸ್ ಸೇರಿಕೊಂಡರು. ಕೆಲವೇ ಸಮಯದಲ್ಲಿ ಅವರು ತಂಡದ ನಾಯಕರಾದರು. 2014 ರಲ್ಲಿ ರೋಹಿತ್ ಅವರ ಸಂಭಾವನೆ 12.50 ಕೋಟಿ ರೂ., 2018ರಲ್ಲಿ 15 ಕೋಟಿ ರೂ.ಗೆ ಏರಿಕೆಯಾಯಿತು. ಇದಾದ ನಂತರ ರೋಹಿತ್ 2022ರಿಂದ 16 ಕೋಟಿ ರೂ. ಪಡೆಯುತ್ತಿದ್ದಾರೆ. ಇದೀಗ ಮೆಗಾ ಹರಾಜಿಗೆ ಬಂದರೆ ಭಾರಿ ಹಣವನ್ನು ಗಳಿಸಬಹುದು ಎನ್ನಲಾಗುತ್ತಿದೆ. ಈ ಎಲ್ಲ ಕುತೂಹಲಗಳಿಗೆ ತೆರಬೀಳಬೇಕೆಂದರೆ ಮೆಗಾ ಹರಾಜುವರೆಗೂ ಕಾಯಬೇಕಿದೆ. (ಏಜೆನ್ಸೀಸ್​)