ಕ್ರೀಡೆ

ರೋಹಿತ್​ ಶರ್ಮ ಅದನ್ನೆಲ್ಲ ಹಣಕ್ಕಾಗಿ… ಹಿಟ್​ಮ್ಯಾನ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ರವಿಚಂದ್ರನ್​ ಅಶ್ವಿನ್​!

ನವದೆಹಲಿ: ಟೀಮ್​ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯಾವುದೇ ವಿಷಯದ ಬಗ್ಗೆ ನೇರವಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಾರೆ. ಯಾರಿಗೂ ಹೆದರದೆ ತನಗೆ ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಆದ್ದರಿಂದಲೇ ಅವರ ಬೌಲಿಂಗ್ ಮತ್ತು ಬ್ಯಾಟಿಂಗ್ ಜತೆಗೆ ಅವರ ನಡೆ, ನುಡಿಗೂ ಹಲವರು ಫಿದಾ ಆಗಿದ್ದಾರೆ. ಇಂತಹ ಅಶ್ವಿನ್ ಇತ್ತೀಚೆಗೆ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಬಗ್ಗೆ ಇಂಟರೆಸ್ಟಿಂಗ್ ಕಾಮೆಂಟ್​ ಮಾಡಿದ್ದಾರೆ. ಅದೇನು ಅಂತ ನಾವೀಗ ತಿಳಿಯೋಣ.

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಅವರನ್ನು ತೆಗೆದುಹಾಕಿದ್ದು ಎಲ್ಲರಿಗೂ ಗೊತ್ತೇ ಇದೆ. ಐಪಿಎಲ್​-2024 ಕ್ಕೆ ಮೊದಲು ಹಿಟ್‌ಮ್ಯಾನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಗುಜರಾತ್ ಟೈಟಾನ್ಸ್‌ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಕರೆತಂದು ನಾಯಕತ್ವದ ಜವಾಬ್ದಾರಿಯನ್ನು ಕೊಡಲಾಯಿತು. ಈ ವಿವಾದದ ಬಳಿಕ ರೋಹಿತ್ ಶರ್ಮ ಆ ಸೀಸನ್​ನಲ್ಲಿ ಆಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ರೋಹಿತ್​ ಆಡಿದರು. ಆದರೆ, ಮುಂಬರುವ ಐಪಿಎಲ್-2025ಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಮುಂಬೈ ತಂಡದಿಂದ ರೋಹಿತ್​ ಹೊರ ಬರಲಿದ್ದಾರೆ ಎನ್ನಲಾಗಿದೆ. ಅವರನ್ನು ಖರೀದಿ ಮಾಡಲು ಸಾಕಷ್ಟು ತಂಡಗಳು ತುದಿಗಾಲಲ್ಲಿ ನಿಂತಿವೆ ಎನ್ನಲಾಗಿದೆ.

ಒಂದು ವೇಳೆ ರೋಹಿತ್​, ಮೆಗಾ ಹರಾಜಿಗೆ ಬಂದರೆ ದಾಖಲೆಯ ಬೆಲೆ ಅಂದರೆ, 40 ರಿಂದ 50 ಕೋಟಿ ಸುಲಭವಾಗಿ ಸಿಗುವುದು ಖಚಿತ ಎನ್ನುತ್ತಾರೆ ಕ್ರಿಕೆಟ್​ ತಜ್ಞರು. ಈ ಬಗ್ಗೆ ಇತ್ತೀಚೆಗೆ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ. ರೋಹಿತ್​ ಮುಂಬೈ ತೊರೆದು ಬೇರೆ ತಂಡಕ್ಕೆ ಹೋಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಹಿಟ್‌ಮ್ಯಾನ್‌ನಂತಹ ಜನರು ಹಣಕ್ಕೆ ಆದ್ಯತೆ ನೀಡುವುದಿಲ್ಲ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ರೋಹಿತ್​ ಟೀಮ್​ ಇಂಡಿಯಾದ ನಾಯಕ. ನಾಲ್ಕು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಅವರಿಗೆ ನಾಯಕತ್ವ ಇಲ್ಲದಿದ್ದರೂ ಮುಂಬೈಗೆ ಯಾವುದೇ ತೊಂದರೆಯಾಗದಿರಬಹುದು. ರೋಹಿತ್​, ಮುಂಬೈ ಪರ ಆಡಿದರೆ ಒಳ್ಳೆಯದಾಗುತ್ತದೆ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ. ರೋಹಿತ್ ಮಾತ್ರವಲ್ಲ ಬಹುತೇಕ ಆಟಗಾರರು ಅಷ್ಟೇ, ಒಂದು ಹಂತ ದಾಟಿದ ನಂತರ ಯಾರೂ ಹಣಕ್ಕೆ ಅಷ್ಟೊಂದು ಮಹತ್ವ ಕೊಡುವುದಿಲ್ಲ ಎಂದು ಅಶ್ವಿನ್ ಕಾಮೆಂಟ್ ಮಾಡಿದ್ದಾರೆ.

ರೋಹಿತ್ ಮುಂಬೈ ತೊರೆಯುವುದಿಲ್ಲ ಎಂಬ ಅಶ್ವಿನ್ ಹೇಳಿಕೆಗೆ ಭಿನ್ನಾಭಿಪ್ರಾಯಗಳಿವೆ. ಹಣಕ್ಕಾಗಿ ಅಲ್ಲ, 5 ಟ್ರೋಫಿಗಳನ್ನು ನೀಡಿದ ನಂತರವೂ ಅವರನ್ನು ಅವಮಾನಕರ ರೀತಿಯಲ್ಲಿ ನಾಯಕತ್ವದಿಂದ ತೆಗೆದುಹಾಕಲಾಗಿದೆ ಎಂದು ಕೆಲವು ನೆಟಿಜನ್‌ಗಳು ಹೇಳುತ್ತಾರೆ. ಹೀಗಾಗಿ ಹಿಟ್‌ಮ್ಯಾನ್ ಸ್ವಾಭಿಮಾನಕ್ಕಾಗಿ ಮುಂಬೈ ಬಿಡುವ ಸಾಧ್ಯತೆಗಳಿವೆ. ಇನ್ನು ಕೆಲವರು ತಾವು ಕಟ್ಟಿದ ಸಾಮ್ರಾಜ್ಯವನ್ನು ಬಿಡುವುದಿಲ್ಲ, ಕೊನೆಯವರೆಗೂ ರೋಹಿತ್​ ಆ ತಂಡದಲ್ಲಿಯೇ ಇರುತ್ತಾರೆ ಎನ್ನುತ್ತಾರೆ. (ಏಜೆನ್ಸೀಸ್​)