

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಮತ್ತು ಅವರ ಸಹಚರರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ದರ್ಶನ್ರನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗುತ್ತಿದೆ.
ಇಂದು ಬೆಳಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೊಲೆರೋ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ಪೊಲೀಸ್ ಅಧಿಕಾರಿಗಳು ದರ್ಶನ್ರನ್ನು ಸ್ಥಳಾಂತರ ಮಾಡುತ್ತಿದ್ದಾರೆ. ದರ್ಶನ್ ಕಾಣದಂತೆ ಬೊಲೆರೋ ವಾಹನದ ಕಿಟಕಿಗೆ ಬಟ್ಟೆ ಹೊದಿಕೆ ಮಾಡಲಾಗಿದೆ. ವಾಹನದ ಹಿಂದೆ ಒಂದು ಆಂಬ್ಯುಲೆನ್ಸ್ ಕೂಡ ಹೋಗುತ್ತಿದೆ.
ಬೆಳಗ್ಗೆ 10 ಗಂಟೆಯಷ್ಟರಲ್ಲಿ ದರ್ಶನ್ ಬಳ್ಳಾರಿ ಜೈಲು ತಲುಪಲಿದ್ದಾರೆ. ಈಗಾಗಲೇ ಜೈಲಿನಲ್ಲಿ ದರ್ಶನ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಸಿಟಿವಿ, ಬಾಡಿ ಕ್ಯಾಮ್ ವ್ಯವಸ್ಥೆಯೂ ಸಹ ಬಳ್ಳಾರಿ ಜೈಲಿನಲ್ಲಿದೆ. ಜಾಮರ್ಗಳನ್ನು ಸಹ ಪರಿಶೀಲಿಸಲಾಗಿದೆ. ಬಳ್ಳಾರಿಯ ವಿಶೇಷ ಭದ್ರತಾ ಬ್ಯಾರಕ್ 15 ರಲ್ಲಿ ದರ್ಶನ್ ಅನ್ನು ಇರಿಸಲಾಗುತ್ತದೆ. ಬಳ್ಳಾರಿ ಜೈಲಿನಲ್ಲಿ ಈಗಾಗಲೇ 385 ಮಂದಿ ಕೈದಿಗಳಿದ್ದಾರೆ. 100 ಮಂದಿ ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಂದು ಕೈಯಲ್ಲಿ ಕಾಫಿ ಕಪ್ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು, ಕುರ್ಚಿಯ ಮೇಲೆ ಆರಾಮಾಗಿ ಕುಳಿತು ರೌಡಿ ವಿಲ್ಸನ್ ಗಾರ್ಡನ್ ಜತೆ ದರ್ಶನ್ ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿರುವ ಫೋಟೋದಲ್ಲಿದೆ. ಇದರ ಬೆನ್ನಲ್ಲೇ ದರ್ಶನ್, ರೌಡಿಶೀಟರ್ ಮಗನ ಜತೆ ಜೈಲಿನಿಂದಲೇ ದರ್ಶನ್ ವಿಡಿಯೋ ಕಾಲ್ ಮೂಲಕ ಮಾತನಾಡಿರುವ ವಿಡಿಯೋ ಸಹ ಲೀಕ್ ಆಗಿದ್ದು, ಎಲ್ಲೆಡೆ ವೈರಲ್ ಆಯಿತು. ದರ್ಶನ್ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಆಗಿನಿಂದಲೂ ಜೈಲಿನಲ್ಲಿ ದರ್ಶನ್ಗೆ ಎಲ್ಲವೂ ಆರಾಮಾಗಿ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಇದೀಗ ಫೋಟೋ ಹೊರಬಂದ ಬಳಿಕ ಆರೋಪ ನಿಜವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ಹೊರಹಾಕಿದರು. ಅಲ್ಲದೆ, ಸರ್ಕಾರವೂ ಕೂಡ ವಿಐಪಿ ವ್ಯವಸ್ಥೆ ನೀಡುತ್ತಿದೆ ಎಂದು ಜನರು ಟೀಕಿಸಿದ್ದರು. ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ದರ್ಶನ್ ಮತ್ತು ಅವರ ಸಹಚರರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.