ಕ್ರೀಡೆ

ಚಾಂಪಿಯನ್ಸ್​ ಟ್ರೋಫಿ ಗೆಲುವಿನ ಕ್ರೆಡಿಟ್​ ದ್ರಾವಿಡ್​ಗೆ ಸಲ್ಲಬೇಕೆಂದ ರೋಹಿತ್; ಗಂಭೀರ್​ಗೆ ಪರೋಕ್ಷ ಟಾಂಗ್​!

ಮುಂಬೈ: ರೋಹಿತ್​ ಶರ್ಮ ತನ್ನ ನಾಯಕತ್ವದಲ್ಲಿ ಹಾಲಿ ವರ್ಷ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಏಕದಿನ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಶ್ರೇಯವನ್ನು ಮಾಜಿ ಕೋಚ್​ ರಾಹುಲ್​ ದ್ರಾವಿಡ್​ಗೆ ನೀಡಿದ್ದಾರೆ. ಈ ಮೂಲಕ ಹಾಲಿ ಮುಖ್ಯ ಕೋಚ್​ ಗೌತಮ್​ ಗಂಭೀರ್​ಗೆ ಪರೋಕ್ಷವಾಗಿ ಟಾಂಗ್​ ನೀಡಿರುವರೇ ಎಂಬ ಪ್ರಶ್ನೆಯೂ ಎದ್ದಿದೆ.

ಮಂಗಳವಾರ ರಾತ್ರಿ ನಡೆದ ಸಿಯೆಟ್​ ಕ್ರಿಕೆಟ್​ ರೇಟಿಂಗ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರೋಹಿತ್​, ದ್ರಾವಿಡ್​ ಕೋಚ್​ ಆಗಿದ್ದ ಅವಧಿಯಲ್ಲಿ ಅನುಸರಿಸಲಾದ ಪ್ರಕ್ರಿಯೆಗಳಿಂದಲೇ ಚಾಂಪಿಯನ್ಸ್​ ಟ್ರೋಫಿ ಒಲಿಯಿತು. ದ್ರಾವಿಡ್​ ಕೋಚ್​ ಆಗಿದ್ದಾಗ ಪಂದ್ಯ ಗೆಲುವಿನ ಬಗ್ಗೆ ಯೋಚನಾ ಲಹರಿಯೊಂದನ್ನು ರೂಪಿಸಲಾಗಿತ್ತು. ಟಿ20 ವಿಶ್ವಕಪ್​ನಲ್ಲಿ ನೆರವಾಗಿದ್ದ ಈ ಅಂಶ, ಚಾಂಪಿಯನ್ಸ್​ ಟ್ರೋಫಿಯಲ್ಲೂ ಯಶ ತಂದುಕೊಟ್ಟಿತು ಎಂದು ವಿವರಿಸಿದರು.

"ನಾನು ಆ ತಂಡವನ್ನು ಇಷ್ಟಪಡುತ್ತೇನೆ. ನಾವು ಹಿಂದೆಯೂ ಕೆಲ ಬಾರಿ ಟ್ರೋಫಿ ಗೆಲುವಿನ ಸನಿಹ ಹೋಗಿದ್ದೆವು. ಆದರೆ ಗೆಲ್ಲಲು ಸಾಧ್ಯವಾಗಿಲಿಲ್ಲ. ಹೀಗಾಗಿ ಏನಾದರೂ ಭಿನ್ನವಾದುದನ್ನು ಮಾಡುವ ಅಗತ್ಯವಿದೆ ಎಂಬುದನ್ನು ಕಂಡುಕೊಂಡೆವು. ಒಬ್ಬ ಅಥವಾ ಇಬ್ಬರು ಆಟಗಾರರಿಂದ ಇದು ಸಾಧ್ಯವಾಗಲಿಲ್ಲ. ಎಲ್ಲ ಕೊಡುಗೆ ಇದರಲ್ಲಿತ್ತು' ಎಂದು ರೋಹಿತ್​ ಚಾಂಪಿಯನ್ಸ್​ ಟ್ರೋಫಿ ಗೆಲುವಿಗಾಗಿ ಸಮಾರಂಭದಲ್ಲಿ ವಿಶೇಷ ಪ್ರಶಸ್ತಿಯೊಂದನ್ನು ಸ್ವೀಕರಿಸಿದ ಬಳಿಕ ತಿಳಿಸಿದರು.