ಕ್ರೀಡೆ

ತವರು ನೆಲದಲ್ಲಿ ಸರಣಿ ವೈಟ್​ವಾಶ್​​; Team India ನಾಯಕ Rohit Sharma ಹೇಳಿದ್ದಿಷ್ಟು

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್​ (New Zealand) ನಡುವಿನ ಟೆಸ್ಟ್​ ಸರಣಿಯಲ್ಲಿ (Test Series) ಆತಿಥೇಯರು ಮತ್ತೊಮ್ಮೆ ಮುಗ್ಗರಿಸಿದ್ದು, ಐತಿಹಾಸಿಕ ಸೋಲು ಕಂಡಿದ್ದಾರೆ. ಭಾರತದ ಎದುರು 25 ರನ್​ಗಳ ಜಯ ಸಾಧಿಸಿದ್ದು, ಈ ಮೂಲಕ ಭಾರತದ ನೆಲದಲ್ಲಿ ಸರಣಿ ಒಂದನ್ನು ಕ್ಲೀನ್​ಸ್ವೀಪ್​ ಮಾಡುವ ಐತಿಹಾಸಿಕ ದಾಖಲೆಯನ್ನು ಬರೆದಿದೆ.

92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್​ ತಂಡವು ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ಭಾರತ ತಂಡವನ್ನು (Team India) 3-0 ಅಂತರದಿಂದ ಸೋಲಿಸಿ ತವರಿನಲ್ಲಿ ಟೀಮ್ ಇಂಡಿಯಾವನ್ನು ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆಯನ್ನು ಸಹ ನ್ಯೂಜಿಲೆಂಡ್​ ತಂಡ ಮಾಡಿದೆ. ಇನ್ನೂ ತವರಿನಲ್ಲಿ ವೈಟ್​ವಾಷ್​ ಆದ ಬಗ್ಗೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಮಾತನಾಡಿದ್ದು, ಸರಣಿ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಬಗ್ಗೆ ಮಾತನಾಡಿದ ರೋಹಿತ್​ ಶರ್ಮ (Rohit Sharma), ನಿಮಗೆ ಗೊತ್ತಿರುವ ಹಾಗೆ ಟೆಸ್ಟ್​ ಸರಣಿ ಸೋಲುವುದು ಅಷ್ಟು ಸುಲಭದ ಮಾತಲ್ಲ. ಇದು ಸುಲಭವಾಗಿ ಅರಗಿಸಿಕೊಳ್ಳಲಾಗದ ವಿಷಯ. ಆದರೆ ಈ ಬಾರಿ ನಾವು ಚೆನ್ನಾಗಿ ಆಡಿಲ್ಲ. ಇದನ್ನು ನಾವು ಒಪ್ಪಿಕೊಳ್ಳಲೇಬೇಕಾದ ವಿಷಯ.

ಸರಣಿಯುದ್ದಕ್ಕೂ ಪ್ರತಿಯೊಂದು ಹಂತದಲ್ಲಿ ನ್ಯೂಜಿಲೆಂಡ್​ ತಂಡದವರು ನಮಗಿಂತ ಉತ್ತಮವಾಗಿ ಆಡಿದರು.  ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ ಮತ್ತು ಅದನ್ನು ಒಪ್ಪಿಕೊಳ್ಳಬೇಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ (ಬೆಂಗಳೂರು ಮತ್ತು ಪುಣೆಯಲ್ಲಿ) ನಾವು ಸಾಕಷ್ಟು ರನ್‌ಗಳನ್ನು ಕಲೆಹಾಕಲಿಲ್ಲ. ಈ ಪಂದ್ಯಗಳಲ್ಲಿ ನಾವು ತುಂಬಾ ಹಿಂದುಳಿದಿದ್ದೆವು. ಆದರೆ ಈ ಬಾರಿ 30 ರನ್​ಗಳ ಮುನ್ನಡೆ ಸಾಧಿಸಿದಾಗ, ನಾವು ಪಂದ್ಯ ಗೆಲ್ಲುತ್ತೇವೆ ಎಂದೇ ಭಾವಿಸಿದ್ದೆವು. ಆದರೆ ನಾನು ಸೇರಿದಂತೆ ಪ್ರಮುಖ ಆಟಗಾರರು ರನ್​ಗಳಿಸಲು ಸಾಧ್ಯವಾಗಲಿಲ್ಲ.

ನಾನು ಬ್ಯಾಟಿಂಗ್ ಮಾಡಲು ಹೋದಾಗ ನನ್ನ ಮನಸ್ಸಿನಲ್ಲಿ ಕೆಲವು ಆಲೋಚನೆಗಳು, ಕೆಲವು ಯೋಜನೆಗಳು ಇದ್ದವು. ಆದರೆ ಈ ಸರಣಿಯುದ್ದಕ್ಕೂ ಅದು ಹೊರಬರಲಿಲ್ಲ. ಇದು ನಿಜಕ್ಕೂ ನನಗೆ ನಿರಾಶಾದಾಯಕವಾಗಿದೆ. ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್ ಈ ಪಿಚ್​ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತೋರಿಸಿಕೊಟ್ಟಿದ್ದಾರೆ. ಇಂತಹ ಪಿಚ್​ಗಳಲ್ಲಿ ಆಡುವಾಗ ಸ್ವಲ್ಪ ಪೂರ್ವಭಾವಿಯಾಗಿರಬೇಕು. ಹೇಗೆ ಆಡಬೇಕೆಂದು ನಮಗೆ ತಿಳಿದಿದೆ. ಆದರೆ ಈ ಸರಣಿಯಲ್ಲಿ ಅದು ಹೊರಬರಲಿಲ್ಲ. ನಾವು ಸಾಂಘಿಕ ಪ್ರದರ್ಶನ ನೀಡಲಿಲ್ಲ. ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಕಮ್​ಬ್ಯಾಕ್​ ಮಾಡುತ್ತೇವೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ.