ಕ್ರೀಡೆ

ಕೊಹ್ಲಿ ಔಟ್​ ಮಾಡಿ ಕೇಕೆ ಹಾಕಿದ ಬಾಂಗ್ಲಾ ಬೌಲರ್​ ವಿರುದ್ಧ​ ಸೇಡು!? ರೋಹಿತ್ ಕೊಟ್ಟ ಉತ್ತರ ವೈರಲ್

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಶನಿವಾರ (ಜೂನ್​ 22) ನಡೆದ ಟಿ20 ವಿಶ್ವಕಪ್​ನ ಸೂಪರ್ 8 ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯ ದಾಖಲಿಸಿದ್ದು ಎಲ್ಲರಿಗು ತಿಳಿದಿದೆ. ಈ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆಯಿತು. ಬಾಂಗ್ಲಾದೇಶದ ಮೊದಲ ವಿಕೆಟ್ ಪತನಗೊಂಡಾಗ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಸಿಟ್ಟಿಗೆದ್ದು ಕೇಕೆ ಹಾಕಿ ಸಂಭ್ರಮಿಸಿದರು. ಇದೇ ಮೊದಲ ಬಾರಿಗೆ ರೋಹಿತ್​ ಇಷ್ಟೊಂದು ಆಕ್ರಮಣಕಾರಿಯಾಗಿ ಕಂಡರು. ಇದು ಅಭಿಮಾನಿಗಳಲ್ಲೂ ಬಹಳ ಅಚ್ಚರಿ ಮೂಡಿಸಿತು.

ಹಿಟ್​ಮ್ಯಾನ್ ಹೀಗೆ ಸಂಭ್ರಮಿಸಲು ಭಾರತದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಯೇ ಕಾರಣ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಈ ಕುರಿತು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ತಮ್ಮ ಸಂಭ್ರಮಕ್ಕೆ ವಿರಾಟ್ ಕಾರಣರಲ್ಲ ಎಂದು ರೋಹಿತ್ ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಔಟ್​ ಮಾಡಿದ ನಂತರ ಬಾಂಗ್ಲಾದೇಶದ ತಂಜಿಮ್ ಹಸನ್ ಸಾಕಿಬ್ ಅವರು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿದರು. ವಿರಾಟ್‌ನತ್ತ ಆವೇಶದಿಂದ ನೋಡುತ್ತಾ ಜೋರಾಗಿ ಕೂಗಿ ಸಂಭ್ರಮಿಸಿದರು. ಬಳಿಕ ಬಾಂಗ್ಲಾದೇಶದ ಬ್ಯಾಟಿಂಗ್​ ವೇಳೆ ಮೊದಲ ವಿಕೆಟ್ (ಲಿಟ್ಟನ್ ದಾಸ್) ಬಿದ್ದಾಗ ರೋಹಿತ್ ಶರ್ಮ ಕೋಪದಿಂದ ಕೇಕೆ ಹಾಕಿ ಸಂಭ್ರಮಿಸಿದರು.

ಕೊಹ್ಲಿ ವಿಕೆಟ್​ ಸಂಭ್ರಮಿಸಿದ್ದಕ್ಕೆ ರೋಹಿತ್ ಸೇಡು ತೀರಿಸಿಕೊಂಡರು ಎಂದು ಜಾಲತಾಣದಲ್ಲಿ ಹೇಳಲಾಗಿದೆ. ಆದರೆ, ನಿಜವಾದ ಕಾರಣದ ಬಗ್ಗೆ ರೋಹಿತ್​ ಸ್ಪಷ್ಟನೆ ನೀಡಿದ್ದಾರೆ. ವಿಕೆಟ್ ಬೀಳುವ ಮೊದಲು ಹಾರ್ದಿಕ್ ಪಾಂಡ್ಯ ಜೊತೆ ಲಿಟ್ಟನ್ ದಾಸ್ ಬಗ್ಗೆ ಚರ್ಚಿಸಿದ್ದೆ. ವಿಶೇಷ ಯೋಜನೆ ಸಿದ್ಧಪಡಿಸಿದೆವು. ಅದಕ್ಕೆ ತಕ್ಕಂತೆ ಫೀಲ್ಡಿಂಗ್ ಸೆಟ್ ಮಾಡಲಾಗಿತ್ತು. ಆ ತಂತ್ರ ಫಲ ನೀಡಿದ್ದರಿಂದ ಆ ಉತ್ಸಾಹದಲ್ಲಿ ಒಂದಷ್ಟು ಕೇಕೆ ಹಾಕಿ ಸಂಭ್ರಮಿಸಿದ್ದಾಗಿ ವಿವರಿಸಿದರು.

ಸೂಪರ್​ 8ರ ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ, ಗ್ರೂಪ್​ 1ರಂದು ಅಗ್ರಸ್ಥಾನದಲ್ಲಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಈಗಾಗಲೇ ಅಫ್ಘಾನಿಸ್ತಾನದ ವಿರುದ್ಧ ಸೋತು ಸುಣ್ಣವಾಗಿರುವ ಆಸ್ಟ್ರೇಲಿಯಾ, ಸೆಮಿಫೈನಲ್​ಗೆ ಹೋಗಬೇಕಾದರೆ ಟೀಮ್​ ಇಂಡಿಯಾ ವಿರುದ್ಧ ಗೆಲ್ಲಲೇಬೇಕಿದೆ. ಇತ್ತ ಟೀಮ್​ ಇಂಡಿಯಾ ಈಗಾಗಲೇ ಸೆಮೀಸ್​ಗೆ ಸ್ಥಾನ ಪಡೆದಿದೆ. (ಏಜೆನ್ಸೀಸ್​)