ಕ್ರೀಡೆ

ಮುಂದಿನ ಏಕದಿನ ವಿಶ್ವಕಪ್​ವರೆಗೆ ರೋಹಿತ್​ ನಾಯಕನಾಗಿ ಮುಂದುವರೆಯಲಿ ಎಂದ ರಾಯಡು! | Ambati Rayudu

Ambati Rayudu: 2027 ರ ವಿಶ್ವಕಪ್‌ವರೆಗೂ ಭಾರತ ಏಕದಿನ ತಂಡದ ನಾಯಕರನ್ನಾಗಿ ರೋಹಿತ್ ಶರ್ಮಾ ಅವರನ್ನೇ ಮುಂದುವರೆಸುವುದು ಸೂಕ್ತ ಎಂದು ಕ್ರಿಕೆಟಿಗ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ರಾಯುಡು, ರೋಹಿತ್​​ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ಅವರ ಭವಿಷ್ಯದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ, ಅದರಲ್ಲೂ, ವಿಶೇಷವಾಗಿ ಅವರ ಫಿಟ್ನೆಸ್ ಬಗೆಗಿನ ಪ್ರಶ್ನೆಗಳಿಗೆ ತೆರೆ ಎಳೆದಿರುವ ರಾಯುಡು, ಏಕದಿನ ವಿಶ್ವಕಪ್​​ಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಶರ್ಮಾ ಸರಿಯಾದ ವ್ಯಕ್ತಿ ಎಂದು ತಿಳಿಸಿದ್ದಾರೆ.

ವರ್ಷದ ಆರಂಭದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಚಾಂಪಿಯನ್​​ ಆಗಲು ರೋಹಿತ್ ಅವರ ನಾಯಕತ್ವ ನಿರ್ಣಾಯಕವಾಗಿತ್ತು ಎಂದಿದ್ದಾರೆ. ರೋಹಿತ್ ಶರ್ಮಾ ಭಾರತ ತಂಡಕ್ಕೆ ಅವಶ್ಯವಿದ್ದು, ನಾವೂ ಐಸಿಸಿ ಪಂದ್ಯಾವಳಿಗಳಲ್ಲಿ ಗೆಲ್ಲಲು ಯಾರು ಬೇಕು ಎಂಬುದನ್ನು ಈಗಲೇ ಅರ್ಥ ಮಾಡಿಕೊಳ್ಳಬೇಕು, ಎರಡು ವರ್ಷಗಳ ನಂತರ ಏನಾಗುತ್ತದೆ, ಯಾರು ಏನಾಗುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದರು.

ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ 76 ರನ್ ಗಳಿಸಿ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೋಹಿತ್, ಈಗಾಗಲೇ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 32 ಶತಕಗಳು ಸೇರಿದಂತೆ 48.76 ಸರಾಸರಿಯಲ್ಲಿ 11,168 ರನ್ ಗಳಿಸಿರುವ ರೋಹಿತ್, ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸಕ್ರಿಯ ಆಟಗಾರರಾಗಿದ್ದಾರೆ.

ಆಧುನಿಕ ಕ್ರಿಕೆಟ್‌ಗೆ ಸೂಕ್ತವಾದ ನಿಸ್ವಾರ್ಥ(Selfless) ಬ್ಯಾಟಿಂಗ್ ವಿಧಾನವನ್ನು ಅಳವಡಿಸಿಕೊಂಡ ಶರ್ಮಾ, ಒಂಬತ್ತು ತಿಂಗಳ ಅವಧಿಯಲ್ಲಿ ಭಾರತವನ್ನು ಎರಡು ಐಸಿಸಿ ಪ್ರಶಸ್ತಿ ಗೆಲುವುಗಳಿಗೆ ಯಶಸ್ವಿಯಾಗಿ ಮುನ್ನಡೆಸಿರುವುದು ಸಾಮಾನ್ಯ ವಿಷಯವಲ್ಲ ಎಂದರು.(ಏಜೆನ್ಸೀಸ್)