ಕ್ರೀಡೆ

ಟಿ20 ವಿಶ್ವಕಪ್​​ನಲ್ಲಿ ಒಂದಲ್ಲ, ಎರಡಲ್ಲ... ಐತಿಹಾಸಿಕ ದಾಖಲೆಗಳನ್ನು ಬರೆಯಲಿದ್ದಾರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ! ​

ಮೋಹನ್​ ಶೆಟ್ಟಿ

ನವದೆಹಲಿ: ಐಸಿಸಿ ಟಿ20 ವಿಶ್ವಕಪ್​ 2024ರ ಟೂರ್ನಿಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಜೂ.05ರಂದು ನ್ಯೂಯಾರ್ಕ್​ನ ನಾಸೌ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅಖಾಡಕ್ಕಿಳಿಯಲು ಸಜ್ಜಾಗಿದೆ. ಇನ್ನು ತಮ್ಮ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಲಿರುವ ರೋಹಿತ್ ಶರ್ಮಾ, ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಐತಿಹಾಸಿಕ ದಾಖಲೆ ಬರೆಯಲು ಇದೀಗ ಮುಂದಾಗಿದ್ದಾರೆ.

ರೋಹಿತ್ ಕ್ಯಾಪ್ಟನ್ಸಿಯಲ್ಲಿ ಐರ್ಲೆಂಡ್​ ವಿರುದ್ಧ ವಿಶ್ವಕಪ್​ ಟೂರ್ನಿಯನ್ನು ಕಿಕ್​ಸ್ಟಾರ್ಟ್​ ಮಾಡಲಿರುವ ಟೀಂ ಇಂಡಿಯಾದ ಎಲ್ಲಾ ಆಟಗಾರರು ಸದ್ಯ ಸಖತ್ ಫಾರ್ಮ್​ನಲ್ಲಿರುವುದು ಗಮನಾರ್ಹ. ಕ್ಯಾಪ್ಟನ್ ಆಗಿ ಮಾತ್ರವಲ್ಲದೇ, ತಮ್ಮ ಬ್ಯಾಟ್​ನಿಂದ ಅತ್ಯುತ್ತಮ ಪ್ರದರ್ಶನ ನೀಡಲಿರುವ ರೋಹಿತ್ ಶರ್ಮಾ, ಇದೀಗ ತಮ್ಮ ಬ್ಯಾಟ್​ ಮೂಲಕ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 151 ಟಿ20 ಪಂದ್ಯಗಳಲ್ಲಿ 3,974 ರನ್​ಗಳನ್ನು ಕಲೆಹಾಕಿರುವ ರೋಹಿತ್​, 4,000 ರನ್​ಗೆ ಸಮೀಪದಲ್ಲಿದ್ದಾರೆ.

ಟಿ20 ಪಂದ್ಯಗಳಲ್ಲಿ 4,000 ರನ್ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೂರನೇ ಕ್ರಿಕೆಟಿಗನಾಗುವ ಅಂಚಿನಲ್ಲಿ ಸದ್ಯ ರೋಹಿತ್ ಇದ್ದಾರೆ. 4000 ರನ್​ ತಲುಪಲು ಶರ್ಮಾಗೆ ಬೇಕಿರುವುದು ಕೇವಲ 26 ರನ್​ಗಳು ಮಾತ್ರ. ಈ ವಿಶೇಷ ರೆಕಾರ್ಡ್​ ಸಾಲಿನಲ್ಲಿ ವಿರಾಟ್ ಕೊಹ್ಲಿ (4,037 ರನ್) ಮತ್ತು ಬಾಬರ್ ಅಜಮ್ (4,023 ರನ್) ಮುಂಚೂಣಿಯಲ್ಲಿದ್ದಾರೆ. ಇದಲ್ಲದೆ, 37 ರನ್ ಗಳಿಸುವಲ್ಲಿ ರೋಹಿತ್ ಯಶಸ್ವಿಯಾದರೆ, ವಿರಾಟ್ (1,141 ರನ್) ಮತ್ತು ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ (1,016 ರನ್) ನಂತರ ಟಿ20 ವಿಶ್ವಕಪ್‌ನಲ್ಲಿ 1,000 ರನ್ ಗಳಿಸಿದ ಮೂರನೇ ಆಟಗಾರನಾಗಿ ಹೊರಹೊಮ್ಮಲಿದ್ದಾರೆ.

ಇದರ ಜತೆಗೆ ಭಾರತದ ಪರ 472 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 597 ಸಿಕ್ಸರ್‌ಗಳನ್ನು ಎಲ್ಲಾ ಮಾದರಿಗಳಲ್ಲಿ ಸಿಡಿಸಿರುವ ರೋಹಿತ್ ಶರ್ಮಾ, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇನ್ನೂ ಮೂರು ಸಿಕ್ಸರ್‌ಗಳನ್ನು ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇನ್ನು ಮೊದಲ ಪಂದ್ಯದಲ್ಲೇ ಐರ್ಲೆಂಡ್​ ತಂಡವನ್ನು ಭಾರತ ಮಣಿಸಿದರೆ, ಕ್ಯಾಪ್ಟನ್ ಆಗಿ ಇಂಟರ್​ನ್ಯಾಷನಲ್​ ಟಿ20 ಪಂದ್ಯಗಳಲ್ಲಿ 41 ಗೆಲುವು ಸಾಧಿಸಿದ ಎಂ.ಎಸ್. ಧೋನಿ ಅವರ ದಾಖಲೆಯನ್ನು ಕೂಡ ಶರ್ಮಾ ಹಿಂದಿಕ್ಕಲಿದ್ದಾರೆ,(ಏಜೆನ್ಸೀಸ್).