ಕ್ರೀಡೆ

VIDEO| ಮೈದಾನದಲ್ಲೇ ಸುಂದರ್​ಗೆ ಹೊಡೆಯಲು ಮುಂದಾದ ರೋಹಿತ್​; ಇದೇ ಮೊದಲಲ್ಲ

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು 32ರನ್​ಗಳ ಸೋಲು ಕಂಡಿದ್ದು, ವ್ಯಾಕ ಟೀಕೆಗೆ ಗುರಿಯಾಗಿದೆ. ನೂತನ ಕೋಚ್​ ಗೌತಮ್​ ಗಂಭೀರ್​ ಅವರ ಮಾರ್ಗದರ್ಶನದಲ್ಲಿ ಮೊದಲ ಪಂದ್ಯ ಟೈ ಆದರೆ, ಎರಡನೇ ಪಂದ್ಯದಲ್ಲಿ 241 ರನ್​ಗಳ ಗುರಿಯನ್ನು ಬೆನ್ನಟ್ಟುವಾಗ ಮುಗ್ಗರಿಸಿದ್ದು ಭಾರತ ತಂಡವು ಸೋಲಿಗೆ ಕಾರಣವಾದ ಅಂಶಗಳನ್ನು ಹುಡುಕುತ್ತಿದೆ. ಇದರ ನಡುವೆಯೇ ಮೈದಾನದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ತಮ್ಮ ಸೌಮ್ಯ ಸ್ವಭಾವದಿಂದಲೇ ಹೆಸರುವಾಸಿಯಾಗಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಮೈದಾನದಲ್ಲಿ ಕೋಪ ಮಾಡಿಕೊಂಡಿರುವ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಆಟಗಾರರು ಮಾಡುವ ಸಣ್ಣ ವಿಷಯಕ್ಕೂ ಕೆಲವೊಮ್ಮೆ ಸಿಟ್ಟಾಗುವ ರೋಹಿತ್​ ಮಯದಾನದಲ್ಲೇ ಅವರ ಕಾಲೆಳೆದಿರುವುದನ್ನು ನೋಡಿದ್ದೇವೆ. ಅದೇ ರೀತಿ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಸ್ಪಿನ್ನರ್​ ವಾಂಷಿಂಗ್ಟನ್​ ಸುಂದರ್​ ಮಾಡಿದ ಕೆಲಸಕ್ಕೆ ಸಿಟ್ಟಾಗಿ ರೋಹಿತ್​ ಅವರನ್ನು ಹೊಡೆಯಲು ಮುಂದಾದ ಘಟನೆ ನಡೆದಿದೆ.

ಶ್ರೀಲಂಕಾ ಬ್ಯಾಟಿಂಗ್​ ಮಾಡುವಾಗ 33ನೇ ಓವರ್​ ಎಸೆಯುವಂತೆ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್​ಗೆ ನಾಯಕ ರೋಹಿತ್​ ಶರ್ಮ ಸೂಚಿಸಿದರು. ಮೊದಲ ಬಾರಿ ರನ್ ಅಪ್ ತೆಗೆದುಕೊಳ್ಳುವಲ್ಲಿ ಸುಂದರ್ ಎಡವಿದಾಗ ಸುಮ್ಮನಿದ್ದ ರೋಹಿತ್​, ಎರಡನೇ ಬಾರಿ ಪುನರಾವರ್ತನೆಯಾದಾಗ ಸುಂದರ್​​ಗೆ ಕೈ ತೋರಿಸಿದ್ರು, ,ಮೂರನೇ ಬಾರಿ ಪುನರಾವರ್ತನೆಯಾದಾಗ ತಾಳ್ಮೆ ಕಳೆದುಕೊಂಡ ರೋಹಿತ್ ಸುಂದರ್​ನತ್ತ ಹೊಡೆಯಲು ಓಡಿ ಬಂದರು. ಇದನ್ನು ನೋಡಿದ ಸಹ ಆಟಗಾರರು ಕೆಲಕಾಲ ನಕ್ಕು ಸುಮ್ಮನಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಆಗಸ್ಟ್​ 02ರಂದು ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ರೋಹಿತ್​ ಶರ್ಮ ಹಾಗೂ ಸುಂದರ್ ಇದೇ ರೀತಿಯ ಘಟನೆ ನಡೆದಿತ್ತು. ಶ್ರೀಲಂಕಾ ಇನಿಂಗ್ಸ್​ನ 29ನೇ ಓವರ್​ನಲ್ಲಿ ಸುಂದರ್ LBWಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡಲಿಲ್ಲ. ಬಳಿಕ ವಾಷಿಂಗ್ಟನ್ ಸುಂದರ್ ನಾಯಕ ರೋಹಿತ್ ಶರ್ಮಾ ಕಡೆಗೆ ನೋಡಲಾರಂಭಿಸಿದರು. ಆ ಸಮಯದಲ್ಲಿ ರೋಹಿತ್ ಕೂಡ ಸ್ಲಿಪ್‌ನಲ್ಲಿದ್ದರು, ಇದರಿಂದಾಗಿ ಚೆಂಡು ಮೊದಲು ಎಲ್ಲಿಗೆ ಬಡಿಯಿತು ಎಂದು ಅವರಿಗೆ ತಿಳಿದಿರಲಿಲ್ಲ. ಹೀಗಾಗಿ ಸುಂದರ್ ದಿಟ್ಟಿಸಿ ತನ್ನತ್ತ ನೋಡುವುದನ್ನು ನೋಡಿದ ರೋಹಿತ್ ನಾನು ನೋಡಿಲ್ಲ, ಬೌಲಿಂಗ್ ಮಾಡಿದ್ದು ನೀನು, ಖಚಿತವಾಗಿ ಅದು ಔಟ್ ಅನ್ನುವ ಹಾಗಿದ್ರೆ ಹೇಳು DRS ತೆಗೆದುಕೊಳ್ಳುವ ಎಂದು ಹೇಳಿದ್ದರು. ಈ ವಿಡಿಯೋ ಕೂಡ ಸಖತ್​ ವೈರಲ್​ ಆಗಿತ್ತು. ರೋಹಿತ್​ ಮೈದಾನದಲ್ಲಿ ತಮಾಷೆ ಮಾಡಿರುವುದು ಇದೇ ಮೊದಲಲ್ಲ. ಹಲವು ಭಾರೀ ಈ ರೀತಿ ಮಾಡಿದ್ದು, ಆಟಗಾರರು ನಗೆಗಡಲಲ್ಲಿ ತೇಲಾಡಿದ್ದಾರೆ.