Rohit Sharma : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ನಂತರ ಹಿಟ್‌ಮ್ಯಾನ್ ಸಣ್ಣ ಸ್ವರೂಪಕ್ಕೆ ವಿದಾಯ ಹೇಳಿದ್ದರು. ಇದೀಗ ಟೆಸ್ಟ್ ಮಾದರಿಗೂ ನಿವೃತ್ತಿ ಘೋಷಣೆ ಮಾಡಿದ್ದು, ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ. ಏಕದಿನ ಮಾದರಿಗೂ ನಿವೃತ್ತಿ ಘೋಷಿಸುವ ಬಗ್ಗೆ ಇದೀಗ ರೋಹಿತ್ ಶರ್ಮ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗಿವೆ.
ಹಿರಿಯ ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗಿನ ಸಂದರ್ಶನದಲ್ಲಿ ರೋಹಿತ್ ಶರ್ಮ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇನೆ. ಟೀಕೆ ಯಾರ ಮೇಲೂ ಪರಿಣಾಮ ಬೀರಬಾರದು ಎಂದು ನಾನು ಹೇಳುತ್ತಿಲ್ಲ, ಕೆಲವರ ಮೇಲೆ ಟೀಕೆಗಳು ಪರಿಣಾಮ ಬೀರುತ್ತದೆ. ಆದರೆ, ಎಲ್ಲರ ಮೇಲಲ್ಲ. ಟೀಕೆಗಳು ಯಾರ ಮೇಲಾದರೂ ಪರಿಣಾಮ ಬೀರಿದ್ದರೆ, ಅವರು ಅದರ ಬಗ್ಗೆಯೇ ಚಿಂತಿಸಿ, ಮನೆಯಲ್ಲಿ ಮಲಗಿರುತ್ತಿದ್ದರು. ಆದರೆ, ಪ್ರತಿಯೊಬ್ಬ ಆಟಗಾರನೂ ದಪ್ಪ ಚರ್ಮವನ್ನು ಹೊಂದಿರುತ್ತಾನೆ ಎನ್ನುವ ಮೂಲಕ ಟೀಕಾಕಾರರಿಗೆ ರೋಹಿತ್ ತಿರುಗೇಟು ನೀಡಿದರು. ಕಾಲ ಕಳೆದಂತೆ ಟೀಕೆಗಳನ್ನು ಹೇಗೆ ಎದುರಿಸಬೇಕೆಂದು ನೀವು ಕಲಿಯುತ್ತೀರಿ ಎಂದು ರೋಹಿತ್ ಹೇಳಿದರು. ಟೀಕೆಗಳು ಆಟಗಾರನ ವೃತ್ತಿಜೀವನದ ಒಂದು ಭಾಗವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಿದ ರೋಹಿತ್, ತಮಗೆ ಇನ್ನೂ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದರು. ಎಷ್ಟು ಕಾಲ ಆಡಬೇಕೆಂಬುದರ ಬಗ್ಗೆ ನನಗೆ ಸಂಪೂರ್ಣ ಸ್ಪಷ್ಟತೆ ಇದೆ ಎನ್ನುವ ಮೂಲಕ ಇನ್ನು ಸ್ವಲ್ಪ ಸಮಯ ಏಕದಿನ ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ಸೂಚನೆ ನೀಡಿದರು. ತಮ್ಮ ವೃತ್ತಿಜೀವನದ ಆರಂಭದಿಂದಲೂ ಮತ್ತು ಈಗ ತಮ್ಮ ಆಟ ಹೇಗೆ ಪ್ರಬುದ್ಧವಾಗಿದೆ ಎಂಬುದನ್ನು ರೋಹಿತ್ ಇದೇ ವೇಳೆ ವಿವರಿಸಿದರು.
ಈ ಹಿಂದೆ ಕ್ರೀಸ್‌ನಲ್ಲಿ ಉಳಿಯಲು ಸಾಕಷ್ಟು ಪ್ರಯತ್ನಿಸುತ್ತಿದ್ದೆ. ಈ ಮೊದಲ 10 ಓವರ್‌ಗಳಲ್ಲಿ 30 ಎಸೆತಗಳನ್ನು ಎದುರಿಸಿ ಕೇವಲ 10 ರನ್‌ಗಳನ್ನು ಗಳಿಸುತ್ತಿದ್ದೆ. ನಾನೀಗ 20 ಎಸೆತಗಳನ್ನು ಎದುರಿಸಿದರೆ 30, 35 ಅಥವಾ 45 ರನ್‌ಗಳನ್ನು ಗಳಿಸುತ್ತೇನೆ. ಮೊದಲ 10 ಓವರ್‌ಗಳಲ್ಲಿ 80 ರನ್ ಗಳಿಸುವುದು ಅಪರಾಧವಲ್ಲ, ನಾನು ಕೂಡ ಹೀಗೆಯೇ ಆಡಲು ಬಯಸುತ್ತೇನೆ ಎಂದು ರೋಹಿತ್ ಹೇಳಿದರು.
ನಾನು ಬಯಸಿದ ರನ್‌ಗಳನ್ನು ಗಳಿಸಿದ್ದೇನೆ. ಈಗ ನಾನು ಬೇರೆ ರೀತಿಯಲ್ಲಿ ಕ್ರಿಕೆಟ್ ಆಡಲು ಬಯಸುತ್ತೇನೆ. ನಾನು ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ವಿಷಯಗಳು ಹೀಗೆಯೇ ಮುಂದುವರಿಯುತ್ತವೆ ಎಂದು ಭಾವಿಸಬೇಡಿ, ನಾನು ಆಟವಾಡುತ್ತಲೇ ಇರುತ್ತೇನೆ ಮತ್ತು 20 ಅಥವಾ 30 ರನ್‌ಗಳನ್ನು ಗಳಿಸುತ್ತೇನೆ. ಮೈದಾನದಲ್ಲಿ ನಾನು ಏನು ಮಾಡಬೇಕೆಂದು ಬಯಸುತ್ತೇನೋ ಅದನ್ನು ಮಾಡಲು ಸಾಧ್ಯವಾಗದ ದಿನದಂದು ನಾನು ಖಂಡಿತವಾಗಿಯೂ ಆಟವಾಡುವುದನ್ನು ನಿಲ್ಲಿಸುತ್ತೇನೆ ಎಂದು ರೋಹಿತ್ ಶರ್ಮ ಹೇಳಿದರು. ತಮ್ಮ ಬ್ಯಾಟಿಂಗ್ ತಂಡಕ್ಕೆ ಉಪಯುಕ್ತವಾಗುತ್ತದೆ ಎಂದು ನನಗೆ ತಿಳಿದಿದೆ ಎಂದರು.
ಅಂದಹಾಗೆ, ರೋಹಿತ್ ಶರ್ಮಾ ಇದುವರೆಗೆ ಭಾರತ ಪರ 273 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 48.8 ಸರಾಸರಿ ಮತ್ತು 92.8 ಸ್ಟ್ರೈಕ್ ರೇಟ್‌ನಲ್ಲಿ 11,168 ರನ್ ಗಳಿಸಿದ್ದಾರೆ. ಇದರಲ್ಲಿ 32 ಶತಕಗಳು ಮತ್ತು 58 ಅರ್ಧಶತಕಗಳು ಸೇರಿವೆ. (ಏಜೆನ್ಸೀಸ್)