ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಸತತ ಜಯಗಳಿಸುತ್ತಿರುವ ಟೀಮ್ ಇಂಡಿಯಾ ಮತ್ತೊಂದು ಮಹತ್ವದ ಕದನಕ್ಕೆ ಸಜ್ಜಾಗಿದೆ. ಇಂದು (ಜೂನ್ 27) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಹಿತ್ ಪಡೆ ಕಾದಾಡಲಿದೆ. ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನದ ದಿಗ್ಗಜ ಹಾಗೂ ಮಾಜಿ ಆಟಗಾರ ಇಂಜಮಾಮ್ ಉಲ್ ಹಕ್ ಆರೋಪಕ್ಕೆ ದಿಟ್ಟ ಉತ್ತರ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್ 8 ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ ಅರ್ಷದೀಪ್ ಸಿಂಗ್ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಇಂಜಮಾಮ್ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ರೋಹಿತ್ರನ್ನು ಪ್ರಶ್ನಿಸಿದಾಗ ಖಡಕ್ ತಿರುಗೇಟು ನೀಡಿದ್ದಾರೆ.
ಇಂಜಮಾಮ್ ಆರೋಪ ಏನು?
ಜೂನ್ 25ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್ 08 ಪಂದ್ಯದಲ್ಲಿ ಟೀಮ್ ಇಂಡಿಯಾ 24 ರನ್ಗಳ ಭರ್ಜರಿ ಜಯ ಗಳಿಸಿತ್ತು. ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಅರ್ಷದೀಪ್ ಸಿಂಗ್ ಬಾಲ್ ಟ್ಯಾಂಪರಿಂಗ್ ಮಾಡುವ ಮೂಲಕ ಮೋಸದಾಟವಾಡಿದ್ದಾರೆ. 15ನೇ ಓವರ್ನಲ್ಲಿ ಅರ್ಷದೀಪ್ ಬೌಲಿಂಗ್ ಮಾಡಿದಾಗ ಚೆಂಡು ರಿವರ್ಸ್ ಸ್ವಿಂಗ್ ಆಗಲು ಶುರು ಮಾಡಿತು. ಇದು ಅಂಪೈರ್ಗಳ ಗಮನಕ್ಕೆ ಬಂದಿಲ್ಲ. ಅರ್ಷದೀಪ್ ಸಿಂಗ್ 15ನೇ ಓವರ್ ಎಸೆದಾಗ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿದೆ ಎಂದರೆ ನೀವು ಗಮನಿಸಬೇಕಾದ ಅಂಶ ತುಂಬಾ ಇದೆ. 12-13ನೇ ಓವರ್ನಲ್ಲಿ ಸ್ವಿಂಗ್ ಆಗದ ಬಾಲ್ ಅರ್ಷದೀಪ್ ಎಸೆತದಲ್ಲಿ ಹೇಗೆ ಸ್ವಿಂಗ್ ಆಗಲು ಸಾಧ್ಯ. ಒಂದು ವೇಳೆ ಪಾಕಿಸ್ತಾನದ ಆಟಗಾರರು ಈ ಕೆಲಸ ಮಾಡಿದ್ದರೆ ಇಷ್ಟೊತ್ತಿಗಾಗಲೇ ವಿಶ್ವ ಕ್ರಿಕೆಟ್ನಲ್ಲಿ ಭಾರೀ ಕೋಲಾಹಲ ಉಂಟಾಗಿರುತ್ತಿತ್ತು. ಅರ್ಷದೀಪ್ ರಿವರ್ಸ್ ಸ್ವಿಂಗ್ ಮಾಡಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಬಾಲ್ ಟ್ಯಾಂಪರಿಂಗ್ ಮಾಡಿದರೆ ಈ ರೀತಿ ಮಾಡಲು ಸಾಧ್ಯ ಎಂದು ಇಂಜಮಾಮ್ ಆರೋಪ ಮಾಡಿದ್ದರು.
ರೋಹಿತ್ ತಿರುಗೇಟು ಏನು? ಇಂಜಮಾಮ್ ಆರೋಪಕ್ಕೆ ತಿರುಗೇಟು ನೀಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದು ಅಗ್ಗದ ಮತ್ತು ಮೂರ್ಖತನದ ಆರೋಪಗಳು ಎಂದಿದ್ದಾರೆ. ಇಲ್ಲಿರುವುದು ಬಿಸಿ ಮತ್ತು ಒಣ ಪಿಚ್‌ಗಳು. ಇಲ್ಲಿ ರಿವರ್ಸ್ ಸ್ವಿಂಗ್ ಆಗದೇ ಇನ್ನೆಲ್ಲಿ ಆಗುತ್ತದೆ? ನಾವೇನು ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿಲ್ಲ ಎಂದು ರೋಹಿತ್ ಶರ್ಮ ಖಾರವಾಗಿ ಪ್ರತಿಕ್ರಿಯೆ ನೀಡಿದರು. (ಏಜೆನ್ಸೀಸ್)