ಕ್ರೀಡೆ

ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆಗಳನ್ನು ಬರೆದ ರೋಹಿತ್​ ಶರ್ಮಾ; ಏನದು?

ಮುಲ್ಲನ್​​ಪುರ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್​ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಪಂಜಾಬ್​ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ 9 ರನ್​ಗಳ ಜಯ ಸಾಧಿಸಿದೆ. ಇನ್ನು ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮಾ ಎರಡು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.

ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾಗೆ ಇದು 250ನೇ ಐಪಿಎಲ್​ ಪಂದ್ಯವಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ ಐಪಿಎಲ್​ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್​ ಮಾಜಿ ನಾಯಕ ಎಂ.ಎಸ್. ಧೋನಿ ಈ ಸಾಧನೆ ಮಾಡಿದ್ದಾರೆ.

ಇನ್ನೂ ಈ ಪಂದ್ಯದಲ್ಲಿ ಓಪನರ್​ ಆಗಿ ಕಣಕ್ಕಿಳಿದ ರೋಹಿತ್​ ಶರ್ಮಾ 25 ಎಸೆತಗಳನ್ನು ಎದುರಿಸಿ 2 ಬೌಂಡರಿ, 3 ಸಿಕ್ಸರ್ ಸಹಿತ 36 ರನ್​ಗಳನ್ನು ಸಿಡಿಸಿ ಸ್ಯಾಮ್​ ಕರ್ರನ್​ಗೆ ವಿಕೆಟ್​ ಒಪ್ಪಿಸಿದರು. 3 ಸಿಕ್ಸರ್​ ಬಾರಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನಿರ್ಮಿಸಿದರು.

ಮುಂಬೈ ಇಂಡಿಯನ್ಸ್​ ಪರ ರೋಹಿತ್ ಶರ್ಮಾ ಇದುವರೆಗೆ 224 ಸಿಕ್ಸರ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಕಿರಾನ್​ ಪೊಲಾರ್ಡ್​ 223 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರು. ಇದಲ್ಲದೆ ರೋಹಿತ್​ ಶರ್ಮಾ ಐಪಿಎಲ್​ನಲ್ಲಿ 6500 ರನ್​ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ 6500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

ರೋಹಿತ್​ಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಮಾತ್ರ ಐಪಿಎಲ್​ನಲ್ಲಿ 6500 ರನ್​ಗಳ ಗಡಿ ದಾಟಿದ ಸಾಧನೆ ಮಾಡಿದ್ದರು. ಪ್ರಸ್ತುತ ಐಪಿಎಲ್‌ನಲ್ಲಿ ಅಧಿಕ ರನ್ ಬಾರಿಸಿರುವವರ ಪಟ್ಟಿಯಲ್ಲಿ 7624 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.