ಕ್ರೀಡೆ

ಕಾಂಗರೂಗಳ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್​; ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಹಿಟ್​ಮ್ಯಾನ್

ಗ್ರಾಸ್​ ಐಲೆಟ್​: ಇಲ್ಲಿನ ಡೆರೆನ್​ ಸ್ಯಾಮಿ ರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ ಸೂಪರ್​ 08 ಪಂದ್ಯದಲ್ಲಿ ರೋಹಿತ್​ ಪಡೆಯು ಮಿಚೆಲ್​ ಮಾರ್ಷ್​ ನೇತೃತ್ವದ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿದ್ದು, ಏಕದಿನ ವಿಶ್ವಕಪ್​ ಫೈನಲ್​ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಇತ್ತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಟಿ20 ಮಾದರಿಯಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಟಾಸ್​ ಗೆದ್ದು ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ ಆಸ್ಟ್ರೇಲಿಯಾ ಬೌಲರ್​ಗಳನ್ನು ಬೆಂಡೆತ್ತಿದ್ದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್​ ಒಳಗೊಂಡಂತೆ 92 ರನ್​ ಸಿಡಿಸಿದರು. ಆಸ್ಟ್ರೇಲಿಯಾ ಬೌಲರ್​ಗಳ ಎಸೆತಗಳಿಗೆ ಮನಸೋ ಇಚ್ಛೆ ಬ್ಯಾಟ್​ ಬೀಸಿದ ರೋಹಿತ್​ ಶರ್ಮಾ ಒಂದೇ ಪಂದ್ಯದಲ್ಲಿ ಮೂರು ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಈ ಐತಿಹಾಸಿಕ ದಾಖಲೆ ಬರೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 8 ಸಿಕ್ಸರ್​ಗಳನ್ನು ಸಿಡಿಸಿದ ರೋಹಿತ್​ ಶರ್ಮಾ ಟಿ20 ಮಾದರಿಯಲ್ಲಿ 200 ಸಿಕ್ಸ್​ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್​ ಶರ್ಮಾ ಟಿ20 ಮಾದರಿಯಲ್ಲಿ ಈವರೆಗೆ ಒಟ್ಟು 203 ಸಿಕ್ಸ್​ ಬಾರಿಸಿದ್ದಾರೆ. ಇದಲ್ಲದೆ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ 4165ರನ್​ಗಳನ್ನು ಬಾರಿಸಿದ್ದು, ಪಾಕಿಸ್ತಾನ ಕ್ರಿಕಟ್​ ತಂಡದ ನಾಯಕ ಬಾಬರ್​ ಅಜಂ (4145 ರನ್) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 4103 ರನ್​ ಗಳಿಸಿರುವ ವಿರಾಟ್​ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

2021ರಲ್ಲಿ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ 57 ರನ್‌ ಗಳಿಸಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕನ ಗರಿಷ್ಠ ಸ್ಕೋರ್ ಆಗಿತ್ತು. ಇದನ್ನು ಆಸೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಹಿಂದಿಕ್ಕಿದರು. ರೋಹಿತ್ ಅವರ 92 ರನ್​​​ ಟಿ20 ವಿಶ್ವಕಪ್‌ನಲ್ಲಿ ನಾಯಕನೊಬ್ಬ ಗಳಿಸಿದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 2010 ರಲ್ಲಿ ಭಾರತದ ವಿರುದ್ಧ ಕ್ರಿಸ್ ಗೇಲ್ 98 ರನ್‌ ಗಳಿಸಿದ್ದು, ನಾಯಕನೊಬ್ಬನ ಗರಿಷ್ಠ ಸ್ಕೋರ್ ಆಗಿದೆ. ಈಗ ಈ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ.

ಟಿ20 ಮಾದರಿಯಲ್ಲಿ ಭಾರತದ ಪರ ಅತಿ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್​​ಗಳ ಸಾಲಿಗೆ ರೋಹಿತ್ ಸೇರ್ಪಡೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಈಗಾಗಲೇ ಯುವರಾಜ್ ಸಿಂಗ್, ಕೆಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್, ಗೌತಮ್ ಗಂಭೀರ್ ಸಹ ಇದ್ದು, ನಂತರದ ಸ್ಥಾನ ರೋಹಿತ್ ಪಾಲಾಗಿದೆ. ಯುವರಾಜ್ ಸಿಂಗ್ ಡರ್ಬನ್​​​ನಲ್ಲಿ ಇಂಗ್ಲೆಂಡ್ ವಿರುದ್ಧ 2007ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದೀಗ ರೋಹಿತ್​ ಶರ್ಮಾ ಕೂಡ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ.