ಕ್ರೀಡೆ

ಟೀಮ್​ ಇಂಡಿಯಾಗೆ ಬಿಗ್​ ಶಾಕ್​! ರೋಹಿತ್​ಗೆ ಗಾಯ, ಗಿಲ್​ಗೆ ಜ್ವರ... ನ್ಯೂಜಿಲೆಂಡ್​ ವಿರುದ್ಧ ಆಡ್ತಾರಾ? Rohit Sharma

Rohit Sharma : ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯ ಆಡಲು ಸಜ್ಜಾಗುತ್ತಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ರೋಹಿತ್​ ಶರ್ಮ ಪಡೆ ಎದುರಿಸಲಿದೆ. ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಭಾರತ, ಕಿವೀಸ್ ವಿರುದ್ಧ ಗೆದ್ದು ಗ್ರೂಪ್​ ಹಂತವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಬಯಕೆ ಹೊಂದಿದೆ. ಈ ಪಂದ್ಯಕ್ಕಾಗಿ ಮೆನ್ ಇನ್ ಬ್ಲೂ ತಂಡವು ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಕಸರತ್ತು ನಡೆಸುತ್ತಿದೆ.

ಆದರೆ, ಈ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ದೊಡ್ಡ ಆಘಾತ ಎದುರಾಗುವ ಸಾಧ್ಯತೆಯಿದೆ. ಅದೇನೆಂದರೆ, ನಾಯಕ ರೋಹಿತ್ ಶರ್ಮ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ, ಸ್ಟಾರ್ ಆಟಗಾರ ಶುಭ್‌ಮನ್ ಗಿಲ್ ಜ್ವರದಿಂದ ಬಳಲುತ್ತಿದ್ದಾರೆಂದು ವರದಿಯಾಗಿದೆ. ಈ ಕಾರಣದಿಂದಾಗಿ, ಬುಧವಾರ ನಡೆದ ತಂಡದ ನೆಟ್ ಅಭ್ಯಾಸವನ್ನು ಇಬ್ಬರೂ ತಪ್ಪಿಸಿಕೊಂಡಿದ್ದಾರೆ.

ಅನಾರೋಗ್ಯದ ಕಾರಣ ಗಿಲ್ ಹೋಟೆಲ್ ಕೋಣೆಗೆ ಸೀಮಿತರಾದರು. ಆದರೆ, ರೋಹಿತ್ ಶರ್ಮ ಮೈದಾನಕ್ಕೆ ಮರಳಿದ ನಂತರವೂ ಅಭ್ಯಾಸ ಅವಧಿಯಲ್ಲಿ ಭಾಗವಹಿಸಲಿಲ್ಲ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಗಾಯವು ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆಯಾಗಿ ರೋಹಿತ್ ಅಭ್ಯಾಸ ಅವಧಿಯನ್ನು ತ್ಯಜಿಸಿದರು ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಅಲ್ಲದೆ, ಕೆಲವು ಓವರ್‌ಗಳ ಕಾಲ ಆಟದಿಂದ ಹೊರಗುಳಿದಿದ್ದರು. ಅದಾದ ನಂತರವೂ ಮತ್ತೆ ಮೈದಾನಕ್ಕೆ ಬಂದರು ಕೂಡ ರೋಹಿತ್ ಹೆಚ್ಚು ಫಿಟ್ ಆಗಿ ಕಾಣಲಿಲ್ಲ. ಇದೀಗ ಅಭ್ಯಾಸದಲ್ಲಿ ತೊಡಗಿಸಿಕೊಳ್ಳದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಕಿವೀಸ್​ ವಿರುದ್ಧದ ಪಂದ್ಯಕ್ಕೆ ಗೈರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ರೋಹಿತ್ ಮತ್ತು ಗಿಲ್ ಅಭ್ಯಾಸದಿಂದ ದೂರವಿರುವ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಅಂದಹಾಗೆ ಶುಭಮನ್ ಗಿಲ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಗಿಲ್ 101 ರನ್ ಗಳಿಸಿದರು. ಪಾಕಿಸ್ತಾನ ವಿರುದ್ಧ 46 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ರೋಹಿತ್ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಒಂದು ವೇಳೆ ಇಬ್ಬರೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡರೆ, ಅದು ಭಾರತಕ್ಕೆ ದೊಡ್ಡ ಹೊಡೆತವಾಗಲಿದೆ.

ಮತ್ತೊಂದೆಡೆ, ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಭ್ಯಾಸ ಆರಂಭಿಸಿದ್ದಾರೆ. ರೋಹಿತ್ ಮತ್ತು ಗಿಲ್ ಕಿವೀಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡರೆ, ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ರಿಷಭ್ ಪಂತ್ ಅಂತಿಮ ತಂಡಕ್ಕೆ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಲ್ಲದೆ, ರೋಹಿತ್​ ಮತ್ತು ಗಿಲ್​ ಮರಳುವ ಸಾಧ್ಯತೆಯೂ ಇದೆ. (ಏಜೆನ್ಸೀಸ್​)